40 ಅಡಿ ಎತ್ತರದಿಂದ ಧುಮ್ಮಿಕ್ಕಿ ಹರಿಯುವ ಈ ಜಲಪಾತಕ್ಕೆ ಕೈಲಾಸ ಕೋನ ಎಂಬ ಹೆಸರಿದೆ. ಅಂಧ್ರದ ಚಿತ್ತೂರು ಜಿಲ್ಲೆಯ ನಾರಾಯಣವನಂ ಮಂಡಲದಲ್ಲಿ ಈ ಜಲಪಾತವಿದೆ. ಇದರ ಸಮೀಪದಲ್ಲೇ ಶಿವ ಪಾರ್ವತಿಯರ ದೇವಾಲಯವಿದೆ.
ಈ ಜಲಪಾತದ ವೈಶಿಷ್ಟ್ಯವೆಂದರೆ ವರ್ಷ ಪೂರ್ತಿ ಇಲ್ಲಿ ನೀರು ಇರುತ್ತದೆ. ಇಲ್ಲಿ ಸ್ನಾನ ಮಾಡುವ ಅವಕಾಶವಿದ್ದರೂ ಅಲ್ಲಿಗೆ ತಲುಪಲು ಸುಸಜ್ಜಿತ ರಸ್ತೆಗಳಿಲ್ಲ. ಈ ಜಲಪಾತದ ನೀರಿನಲ್ಲಿ ಸಾಕಷ್ಟು ಖನಿಜ ಮತ್ತು ಔಷಧೀಯ ಗುಣಗಳಿವೆ. ಇವು ಹಲವು ಕಾಯಿಲೆಗಳನ್ನು ಗುಣಪಡಿಸುತ್ತವೆ ಎನ್ನಲಾಗಿದೆ. ಪ್ರವಾಸಿಗರಿಗೆ ಜಲಪಾತದ ಮೇಲೇರಲು ಅವಕಾಶವಿಲ್ಲ.
ವೆಂಕಟೇಶ್ವರ ಸ್ವಾಮಿಯ ವಿವಾಹದಲ್ಲಿ ಪಾಲ್ಗೊಳ್ಳಲು ಬಂದಿದ್ದ ಶಿವನಿಗೆ ಇಲ್ಲಿನ ಪ್ರಕೃತಿ ಸೌಂದರ್ಯ ಇಷ್ಟವಾಗಿ ಇಲ್ಲೇ ಧ್ಯಾನ ಮಾಡಲು ನಿಂತನಂತೆ. ಹಾಗಾಗಿ ಇಲ್ಲಿಗೆ ಕೈಲಾಸ ಕೋನ ಎಂಬ ಹೆಸರು ಬಂದಿದೆ ಎನ್ನಲಾಗಿದೆ. ಇಲ್ಲಿಗೆ ತಲುಪಲು ಸಾಕಷ್ಟು ಬಸ್ ಗಳಿವೆ. ಅಕ್ಟೋಬರ್ ನಿಂದ ಫೆಬ್ರವರಿ ತಿಂಗಳ ಮಧ್ಯೆ ಇಲ್ಲಿಗೆ ಭೇಟಿ ನೀಡುವುದು ಹೆಚ್ಚು ಸೂಕ್ತ. ಅತಿಥಿಗೃಹದ ವ್ಯವಸ್ಥೆಯೂ ಇಲ್ಲಿದೆ.