ದೇಶದಲ್ಲಿ ಕಳೆದ ಕೆಲವು ದಿನಗಳಿಂದ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಪ್ರತಿದಿನವೂ ಏರಿಕೆಯಾಗುತ್ತಿದ್ದು, ಇದರಿಂದ ಶ್ರೀಸಾಮಾನ್ಯರು ಹೈರಾಣಾಗಿ ಹೋಗಿದ್ದಾರೆ. ಈ ಮೊದಲೇ ಕೊರೊನಾ ಲಾಕ್ಡೌನ್ ನಿಂದಾಗಿ ಆರ್ಥಿಕವಾಗಿ ತತ್ತರಿಸಿದ್ದ ಸಾರ್ವಜನಿಕರಿಗೆ ತೈಲ ಬೆಲೆ ಏರಿಕೆ ಮತ್ತೊಂದು ಹೊರೆಯಾಗಿ ಪರಿಣಮಿಸಿದೆ.
ಇದರ ಮಧ್ಯೆ ಕಾನ್ಪುರದ ಕಲ್ಯಾಣಪುರದಲ್ಲಿನ ಪೆಟ್ರೋಲ್ ಬಂಕ್ ಒಂದರಲ್ಲಿ ಕೇವಲ 12 ರೂಪಾಯಿಗೆ ಪೆಟ್ರೋಲ್ ಮಾರಾಟ ಮಾಡಲಾಗಿದೆ. ಹೌದು, ತೈಲ ಬೆಲೆ ಏರಿಕೆಯನ್ನು ವಿರೋಧಿಸಲು ರಾಷ್ಟ್ರೀಯ ಟ್ರೇಡ್ ಯೂನಿಯನ್ ಕಾಂಗ್ರೆಸ್ ಕಾರ್ಯಕರ್ತರು ಬುಧವಾರದಂದು ಪ್ರತಿಭಟನೆ ನಡೆಸುವ ವೇಳೆ 12 ರೂಪಾಯಿಗೆ ಲೀಟರ್ ಪೆಟ್ರೋಲ್ ಮಾರಾಟ ಮಾಡುವ ಮೂಲಕ ತಮ್ಮ ಆಕ್ರೋಶ ಹೊರಹಾಕಿದ್ದಾರೆ.
ಕೇವಲ ಒಂದು ಗಂಟೆ ಅವಧಿಗೆ ಮಾತ್ರ ಈ ಬೆಲೆಯಲ್ಲಿ ಪೆಟ್ರೋಲ್ ಲಭ್ಯವಾಗಿದ್ದು, ಹೀಗಾಗಿ ಇದನ್ನು ಖರೀದಿಸಲು ವಾಹನ ಸವಾರರು ಮುಗಿಬಿದ್ದಿದ್ದಾರೆ. ಈ ಸಂದರ್ಭದಲ್ಲಿ ಯಾವುದೇ ಸಾಮಾಜಿಕ ಅಂತರವನ್ನು ಕಾಪಾಡಿಕೊಂಡಿಲ್ಲ. ಈಗ ಪ್ರತಿಭಟನೆಗೆ ಕರೆ ನೀಡಿದ್ದ ಕಾರ್ಯಕರ್ತರ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಳ್ಳಲು ಮುಂದಾಗಿದ್ದಾರೆ.