ನವದೆಹಲಿ: ನೂತನ ಕೃಷಿ ಕಾಯ್ದೆ ವಿರೋಧಿಸಿ ರೈತರು ನಡೆಸುತ್ತಿರುವ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಕೇಂದ್ರ ಸರ್ಕಾರ ಪ್ರತಿಭಟನೆ ನಿಭಾಯಿಸುವ ರೀತಿಗೆ ಸುಪ್ರೀಂ ಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.
ಕೃಷಿ ಕಾಯ್ದೆ ಹಿಂಪಡೆಯುವಂತೆ ರೈತರು ಒತ್ತಾಯಿಸುತ್ತಿದ್ದಾರೆ. ಹಲವು ರಾಜ್ಯಗಳು ಈ ಕಾಯ್ದೆ ವಿರೋಧಿಸುತ್ತಿವೆ. ಆದಾಗ್ಯೂ ಕಾಯ್ದೆ ಜಾರಿಗೆ ತರಲೇಬೇಕು ಎಂದು ಕೃಷಿ ಕಾಯ್ದೆಯನ್ನು ಕೇಂದ್ರ ಸರ್ಕಾರ ಪ್ರತಿಷ್ಠೆಯನ್ನಾಗಿ ತೆಗೆದುಕೊಂಡಿರುವುದೇಕೆ? ಕಾನೂನು ಜಾರಿಗೆ ತರದಿದ್ದರೆ ಆಗುವ ಸಮಸ್ಯೆಯಾದರೂ ಏನು? ಸರ್ಕಾರಕ್ಕೆ ಜವಾಬ್ದಾರಿಯಿದ್ದರೆ ಕಾನೂನು ಅನುಷ್ಠಾನಕ್ಕೆ ತಡೆ ಹಿಡಿಯುವಂತೆ ಮುಖ್ಯ ನ್ಯಾಯಮೂರ್ತಿ ಎಸ್.ಎ. ಬೋಬ್ಡೆ ನೇತೃತ್ವದ ನ್ಯಾಯಪೀಠ ತಿಳಿಸಿದೆ.
ಪ್ರತಿಭಟನೆಯಲ್ಲಿ ಹಿರಿಯರು, ಮಹಿಳೆಯರು ಭಾಗಿಯಾಗುತ್ತಿದ್ದಾರೆ. ಚಳಿಯಿಂದ ತೊಂದರೆ ಅನುಭವಿಸುತ್ತಿದ್ದಾರೆ ಇಷ್ಟಾದರೂ ಸರ್ಕಾರ ಸಮಸ್ಯೆ ಬಗೆಹರಿಸುವಲ್ಲಿ ವಿಫಲವಾಗಿದೆ. ಸರ್ಕಾರದ ನಡೆ ನಮಗೂ ಅಸಮಾಧಾನ ತಂದಿದೆ ಎಂದು ಕಿಡಿಕಾರಿರುವ ಸುಪ್ರೀಂ ಕೋರ್ಟ್, ಕೇಂದ್ರ ನೇಮಿಸಿರುವ ಸಮಿತಿ ನಿರ್ಧಾರ ಕೈಗೊಳ್ಳುವವರೆಗೂ ಕಾನೂನು ಜಾರಿಗೊಳಿಸದಂತೆ ತಡೆ ಹಿಡಿಯುವುದಾಗಿ ಆದೇಶ ನೀಡಿದೆ.