ಮುಂಬೈ: ಮೂರು ಅಂತಸ್ತಿನ ಕಟ್ಟಡ ಕುಸಿದ ಪರಿಣಾಮ 10 ಜನರು ಸಾವನ್ನಪ್ಪಿದ್ದು, 25ಕ್ಕೂ ಹೆಚ್ಚು ಜನರು ಅವಶೇಷಗಳ ಅಡಿಯಲ್ಲಿ ಸಿಲುಕಿಕೊಂಡಿರುವ ಘಟನೆ ಮಹಾರಾಷ್ಟ್ರದ ಭಿವಾಂಡಿಯಲ್ಲಿ ನಡೆದಿದೆ.
ಇಂದು ಮುಂಜಾನೆ 3.40ರ ಸುಮಾರಿಗೆ ಈ ಅವಘಡ ಸಂಭವಿಸಿದ್ದು, ಭಿವಾಂಡಿಯ ಪಟೇಲ್ ಕಾಂಪೌಂಡ್ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಎನ್ಡಿಆರ್ಎಫ್ ತಂಡದಿಂದ ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗಿದೆ. ಅವಶೇಷಗಳಡಿಯಲ್ಲಿ ಸಿಲುಕಿದ್ದ ಪುಟ್ಟ ಮಗು ಸೇರಿದಂತೆ ಈವರೆಗೆ 20 ಜನರನ್ನು ರಕ್ಷಿಸಲಾಗಿದೆ.
ಇನ್ನೂ 25 ಜನರು ಕಟ್ಟಡದ ಅವಶೇಷಗಳಡಿ ಸಿಲುಕಿರುವ ಶಂಕೆಯಿದೆ. 30 ವರ್ಷ ಹಳೆಯದಾದ ಈ ಕಟ್ಟಡದಲ್ಲಿ ಸುಮಾರು 20 ಕುಟುಂಬಗಳು ವಾಸವಾಗಿದ್ದವು.