ಕುತಂತ್ರ ಬುದ್ಧಿಯ ಚೀನಾ, ಲಡಾಕ್ ನ ಗಲ್ವಾನ್ ವ್ಯಾಲಿಯಲ್ಲಿ ಭಾರತೀಯ ಯೋಧರೊಂದಿಗೆ ಸಂಘರ್ಷಕ್ಕಿಳಿದಿದ್ದು, ಈ ಕಾದಾಟದಲ್ಲಿ 20 ಮಂದಿ ಭಾರತೀಯ ಯೋಧರು ಹುತಾತ್ಮರಾಗಿದ್ದಾರೆ. ಈ ವೀರ ಯೋಧರಿಗೆ ಇಡೀ ದೇಶದ ಜನತೆ ಕಣ್ಣೀರು ಮಿಡಿಯುತ್ತಿದ್ದು, ಗುರುವಾರದಂದು ಹುತಾತ್ಮ ಯೋಧರಿಗೆ ಭಾವಪೂರ್ಣ ವಿದಾಯ ಹೇಳಲಾಗಿದೆ.
ಇದರ ಮಧ್ಯೆ ಸೇನೆಯ ಮಾಹಿತಿ ಸಂವಹನ ವಿಭಾಗದ ಕಣ್ತಪ್ಪಿನಿಂದಾಗಿ ಯೋಧನ ಕುಟುಂಬವೊಂದು ದುಃಖದ ಮಡುವಿನಲ್ಲಿ ಮುಳುಗಿದ್ದು, ಬಳಿಕ ಸ್ವತಃ ಯೋಧನೇ ಕರೆ ಮಾಡಿ ತಾನು ಜೀವಂತವಾಗಿರುವುದಾಗಿ ಹೇಳಿದ ಬಳಿಕ ಕುಟುಂಬ ಸದಸ್ಯರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.
ಬಿಹಾರದ ಸರನ್ ಜಿಲ್ಲೆಯ ದಿಗ್ರ ಹಳ್ಳಿಯ ಸುನಿಲ್ ಕುಮಾರ್ ಬಿಹಾರ್ ರೆಜಿಮೆಂಟಿನ ಯೋಧರಾಗಿದ್ದು, ಚೀನಾ ಜೊತೆಗಿನ ಸಂಘರ್ಷದಲ್ಲಿ ಇವರು ಹುತಾತ್ಮರಾಗಿದ್ದಾರೆಂದು ಮಾಹಿತಿ ನೀಡಲಾಗಿತ್ತು. ವಾಸ್ತವವಾಗಿ ಇದೇ ಹೆಸರಿನ ಪಟನಾದ ಹವಾಲ್ದಾರ್ ಹುತಾತ್ಮರಾಗಿದ್ದು, ಬಳಿಕ ಇದನ್ನು ಅರಿತ ಸೇನೆ ಸಂವಹನ ವಿಭಾಗ ದಿಗ್ರ ಹಳ್ಳಿಯ ಸುನಿಲ್ ಸುರಕ್ಷಿತವಾಗಿದ್ದಾರೆ ಎಂದು ತಿಳಿಸಿತ್ತು. ಆದರೂ ಕೂಡಾ ಕುಟುಂಬ ಆತಂಕದಲ್ಲೇ ಕಳೆದಿದ್ದು, ಬಳಿಕ ಸ್ವತಃ ಸುನಿಲ್ ಕರೆ ಮಾಡಿ ವಿಷಯ ತಿಳಿಸಿದ ಬಳಿಕ ಗೊಂದಲ ಬಗೆಹರಿದಿದೆ.