ಮುಂಬೈ: ಬಾಲಿವುಡ್ ಡ್ರಗ್ಸ್ ಪ್ರಕರಣ ದಿನದಿಂದ ದಿನಕ್ಕೆ ಕುತೂಹಲ ಪಡೆದುಕೊಳ್ಳುತ್ತಿದ್ದು, ನಿರ್ಮಾಪಕ ಕರಣ್ ಜೋಹರ್ ಆಪ್ತ, ಕಾರ್ಯಕಾರಿ ನಿರ್ಮಾಪಕ ಕ್ಷಿತಿಜ್ ಪ್ರಸಾದ್ ನನ್ನು ಎನ್.ಸಿ.ಬಿ. ಅಧಿಕಾರಿಗಳು ಬಂಧಿಸಿದ್ದಾರೆ. ಈ ಮೂಲಕ ಡ್ರಗ್ಸ್ ಪ್ರಕರಣ ಸಂಬಂಧ ಬಿಟೌನ್ ನ ಇನ್ನಷ್ಟು ಖ್ಯಾತನಾಮರ ಹೆಸರು ಹೊರಬರುವ ಸಾಧ್ಯತೆ ಇದೆ.
ಡ್ರಗ್ಸ್ ಪ್ರಕರಣಕ್ಕೆ ಸಂಬಧಿಸಿದಂತೆ ಕ್ಷಿತಿಜ್ ಮನೆ ಮೇಲೆ ನಡೆದ ದಾಳಿಯಲ್ಲಿ ಕೆಲ ಮಾದಕ ವಸ್ತುಗಳು ಸಿಕ್ಕಿದ್ದವು. ಅಲ್ಲದೇ ಎನ್.ಸಿ.ಬಿ. ಮುಂದೆ ವಿಚಾರಣೆಗೆ ಹಾಜರಾಗಿದ್ದ ನಟಿ ರಾಕುಲ್ ಪ್ರೀತ್ ಸಿಂಗ್ ಕ್ಷಿತಿಜ್ ಹೆಸರನ್ನು ಬಾಯ್ಬಿಟ್ಟಿದ್ದಳು ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಎನ್.ಸಿ.ಬಿ. ಅಧಿಕಾರಿಗಳು ಸೆ.25 ರಂದು ಕ್ಷಿತಿಜ್ ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು. ಇದೀಗ ಕ್ಷಿತಿಜ್ ನನ್ನು ಬಂಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಡ್ರಗ್ಸ್ ಜಾಲದ ನಂಟಿಗೆ ಸಂಬಂಧಿಸಿದಂತೆ ಎನ್.ಸಿ.ಬಿ. ವಿಚಾರಣೆ ವೇಳೆ ಕ್ಷಿತಿಜ್ ಬಾಲಿವುಡ್ ನ ಹಲವು ಸೆಲೆಬ್ರಿಟಿಗಳ ಹೆಸರನ್ನು ಹೇಳಿದ್ದಾನೆ ಎನ್ನಲಾಗಿದ್ದು, ಅವರೆಲ್ಲರಿಗೂ ಎನ್.ಸಿ.ಬಿ. ನೊಟೀಸ್ ನೀಡುವ ಸಾಧ್ಯತೆ ಇದೆ.
ಇನ್ನು ಕ್ಷಿತಿಜ್ ಪ್ರಸಾದ್ ಬಂಧನವಾಗುತ್ತಿದ್ದಂತೆಯೇ ಪ್ರತಿಕ್ರಿಯಿಸಿರುವ ಕರಣ್ ಜೋಹರ್, ಕ್ಷಿತಿಜ್ ನನ್ನ ಆಪ್ತನಲ್ಲ, ಈ ಬಗ್ಗೆ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿರುವ ಸುದ್ದಿ ಸುಳ್ಳು. 2019ರಲ್ಲಿ ಒಮ್ಮೆ ಧರ್ಮಾ ಎಂಟರ್ ಟೇನ್ ಮೆಂಟ್ ಸಂಸ್ಥೆಯಲ್ಲಿ ಒಂದು ಪ್ರಾಜೆಕ್ಟ್ ಸಲುವಾಗಿ ಕಾರ್ಯಕಾರಿ ನಿರ್ಮಾಪಕರಾಗಿ ನೇಮಕರಾಗಿದ್ದರು ಅಷ್ಟೆ. ಆದರೆ ಆ ಪ್ರಾಜೆಕ್ಟ್ ಮುಂದುವರೆದಿಲ್ಲ. ಹೀಗಾಗಿ ನನಗೂ ಕ್ಷಿತಿಜ್ ಗೂ ವೈಯಕ್ತಿಕವಾಗಿ ಪರಿಚಯವಿಲ್ಲ ಎಂದು ತಿಳಿಸಿದ್ದಾರೆ.