ರಾನು ಮಂಡಲ್, ರಾತ್ರೋ ರಾತ್ರಿ ಸ್ಟಾರ್ ಪಟ್ಟ ಪಡೆದ ಗಾಯಕಿ. ರಣಘಾಟ್ ರೈಲ್ವೆ ನಿಲ್ದಾಣದಲ್ಲಿ ಸುಮಧುರ ಕಂಠದ ಮೂಲಕ ಹಾಡನ್ನು ಹಾಡಿ ಭಿಕ್ಷೆ ಬೇಡುತ್ತಿದ್ದ ರಾನು ಆ ಹಾಡುಗಳ ಮೂಲಕವೇ ಜಗತ್ತಿಗೆ ಚಿರಪರಿಚಿತರಾದರು.
ತೇರಿ ಮೇರಿ ಹಾಡಿನ ಮೂಲಕ ರಾನು ಬದುಕಿನಲ್ಲಿ ಹೊಸ ತಿರುವು ಶುರುವಾಯಿತು ಅಂದರೆ ತಪ್ಪಾಗಲಿಕ್ಕಿಲ್ಲ. ಆದರೆ ರಾನು ಬದುಕು ಇದೀಗ ಮತ್ತೆ ಹಳೆಯ ಸ್ಥಿತಿ ತಲುಪುತ್ತಿದೆಯಂತೆ.
ಹೌದು, ರಾನು ಹಾಡು ಕೇಳಿ ಖ್ಯಾತ ಸಂಗೀತ ನಿರ್ದೇಶಕ ಹಿಮೇಶ್ ರೇಶ್ಮಿಯಾ ಕೂಡ ಹಲವು ಅವಕಾಶ ಸಿಗುವಂತೆ ಮಾಡಿದ್ದರು.
ಅಷ್ಟೇ ಅಲ್ಲ, ರಾನುಗೆ ಇತರೆ ಭಾಷೆಗಳಿಂದಲೂ ಅವಕಾಶಗಳು ಲಭಿಸಿವೆ ಎಂದು ಹೇಳಲಾಗಿತ್ತು. ಇದರ ಮಧ್ಯೆ ಕೊರೊನಾ ಮಹಾಮಾರಿ ಬಂದ ನಂತರ ರಾನುಗೆ ಅವಕಾಶಗಳು ಸಿಗದೆ ಮನೆಯಲ್ಲಿಯೇ ಕೂರುವ ಸ್ಥಿತಿ ಎದುರಾಗಿತ್ತು. ಅವಕಾಶಗಳು ಇಲ್ಲದೇ ಒಂದೊತ್ತಿನ ಊಟಕ್ಕೂ ಮತ್ತೆ ರಾನು ಕಷ್ಟಪಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.
ಇದೀಗ ಮತ್ತೆ ಆರ್ಥಿಕ ಸಂಕಷ್ಟ ಅವರಿಗೆ ಎದುರಾಗಿದೆ. ಇದ್ದ ಮನೆಯನ್ನೂ ತೊರೆದು ಹಳೆಯ ಮನೆಯತ್ತ ಹೋಗಿದ್ದಾರೆ ಎಂದು ಹೇಳಲಾಗುತ್ತಿದೆ. ಹಣಕ್ಕಾಗಿ ಮತ್ತೆ ಸಹಾಯ ಬೇಡುತ್ತಿದ್ದಾರೆ ಎನ್ನಲಾಗಿದೆ. ಸಾಕಷ್ಟು ಕಷ್ಟಗಳ ನಡುವೆ ಒಂದು ಆಸರೆ ಸಿಕ್ತು ಅನ್ನೋ ಸಮಯದಲ್ಲಿ ಕೊರೊನಾದಿಂದಾಗಿ ಮತ್ತೆ ಬೀದಿಗೆ ಬೀಳುವ ಸ್ಥಿತಿ ರಾನುಗೆ ಬಂದಿದೆ.