ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣಕ್ಕೆ ಪ್ರಧಾನಿ ನರೇಂದ್ರ ಮೋದಿಯವರು ಇಂದು ಶುಭ ಮುಹೂರ್ತದಲ್ಲಿ ಶಿಲಾನ್ಯಾಸ ನೆರವೇರಿಸಲಿದ್ದು, ಕೋಟ್ಯಾಂತರ ಭಾರತೀಯರ ಬಹುದಿನಗಳ ಕನಸು ನನಸಾಗುವ ಕಾಲ ಬಂದಿದೆ. ಹೀಗಾಗಿ ಭಾರತೀಯರಲ್ಲಿ ಸಂಭ್ರಮ ಮನೆ ಮಾಡಿದ್ದು ಅದನ್ನು ವಿವಿಧ ರೀತಿಯಲ್ಲಿ ಆಚರಣೆ ಮಾಡುತ್ತಿದ್ದಾರೆ.
ಕರ್ನಾಟಕದ ಎಲ್ಲ ದೇವಾಲಯಗಳಲ್ಲೂ ಇಂದು ವಿಶೇಷ ಪೂಜೆ ನಡೆಯುತ್ತಿದ್ದು, ಶ್ರೀ ರಾಮ ಮಂದಿರ ನಿರ್ಮಾಣ ಕಾರ್ಯ ನಿರ್ವಿಘ್ನವಾಗಿ ನೆರವೇರಲಿ ಎಂದು ಪ್ರಾರ್ಥಿಸಲಾಗುತ್ತದೆ. ಬಹಳಷ್ಟು ಮಂದಿ ಮನೆಗಳಲ್ಲಿ ಸಿಹಿ ತಯಾರಿಸಿ ಇದರ ಸಂತಸವನ್ನು ಹಂಚಿಕೊಳ್ಳಲು ಮುಂದಾಗಿದ್ದಾರೆ.
ಇದರ ಮಧ್ಯೆ ವಿದೇಶದಲ್ಲಿರುವ ಭಾರತೀಯರಲ್ಲಿ ಸಂಭ್ರಮ ಮನೆ ಮಾಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೋ ಒಂದು ಎಲ್ಲರ ಗಮನ ಸೆಳೆದಿದೆ.
ಭಾರತದ ಸಾಂಪ್ರದಾಯಿಕ ಉಡುಗೆ ತೊಟ್ಟಿರುವ ಪುರುಷ ಹಾಗೂ ಮಹಿಳೆಯರು ಡೋಲು ಬಡಿಯುತ್ತಾ ಸಂಭ್ರಮಾಚರಣೆ ಮಾಡಿದ್ದಾರೆ. ಇಂತಹುದೊಂದು ವಿಶೇಷ ಘಟನೆ ಸ್ಪೇನ್ ನಲ್ಲಿ ನಡೆದಿದೆ ಎನ್ನಲಾಗಿದ್ದು, ಆದರೆ ವಾಸ್ತವವಾಗಿ ಈ ವಿಡಿಯೋ ರಾಮ ಮಂದಿರ ನಿರ್ಮಾಣ ಶಿಲಾನ್ಯಾಸ ಸಂಭ್ರಮಾಚರಣೆಯಲ್ಲ. ಬದಲಾಗಿ 2018 ರಲ್ಲಿ ಪುಣೆ ಮೂಲದ ತಂಡವೊಂದು ಸ್ಪೇನ್ ಗೆ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಹೋದ ವೇಳೆ ತೆಗೆಯಲಾಗಿದ್ದ ವಿಡಿಯೋ ಎಂದು ಹೇಳಲಾಗಿದೆ.