ನವದೆಹಲಿ: ಕೊರೊನಾ ಮಹಾಮಾರಿ ತಡೆಗೆ ದೇಶಾದ್ಯಂತ ಅತಿದೊಡ್ಡ ಲಸಿಕಾ ಅಭಿಯಾನಕ್ಕೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದ್ದಾರೆ. ದೇಶದ ಜನತೆ ಕಾಯುತ್ತಿದ್ದ ಆ ಕ್ಷಣ ಇದೀಗ ಬಂದಿದೆ ಎಂದು ಹೇಳಿದ್ದಾರೆ.
ಕೊರೊನಾ ಹೆಮ್ಮಾರಿಗೆ ಬಹಳ ಕಡಿಮೆ ಸಮಯದಲ್ಲಿ ಲಸಿಕೆ ಬಂದಿದೆ. ಇದಕ್ಕಾಗಿ ಇಡೀ ದೇಶದ ಜನತೆಗೆ ಅಭಿನಂದಿಸುತ್ತೇನೆ. ಇಡೀ ವಿಶ್ವವೇ ಕಾಯುತ್ತಿದ್ದ ವ್ಯಾಕ್ಸಿನ್ ನಮ್ಮ ಕೈಸೇರಿದೆ. ದೇಶದ ವಿಜ್ನಾನಿಗಳು, ಸಂಶೋಧಕರ ಶ್ರಮದಿಂದ ಲಸಿಕೆ ಬಂದಿದೆ ಎಂದು ತಿಳಿಸಿದ್ದಾರೆ.
ಸ್ವದೇಶಿ ನಿರ್ಮಿತ ವ್ಯಾಕ್ಸಿನ್ ಭಾರತದ ಸಾಧನೆಯ ಪ್ರತೀಕ. ಒಂದಲ್ಲ ಎರಡು ವ್ಯಾಕ್ಸಿನ್ ಈಗ ಚಿಕಿತ್ಸೆಗೆ ಲಭ್ಯ ಎಂಬುದು ಸಂತಸದ ವಿಚಾರ. ಮೊದಲ ಹಂತದಲ್ಲಿ ಕೊರೊನಾ ವಾರಿಯರ್ಸ್ ಗೆ ಲಸಿಕೆ ನೀಡಲಾಗುವುದು. ಸರ್ಕಾರಿ ಹಾಗೂ ಖಾಸಗಿ ಆರೋಗ್ಯ ಕಾರ್ಯಕರ್ತರಿಗೆ ಲಸಿಕೆ ನೀಡಲಾಗುತ್ತದೆ. ಇವರು ಲಸಿಕೆ ಪಡೆಯಲು ಮೊದಲ ಹಕ್ಕುದಾರರು. ಎಲ್ಲರಿಗೂ ಕೇಂದ್ರ ಸರ್ಕಾರ ಉಚಿತವಾಗಿ ಲಸಿಕೆ ನೀಡಲಿದೆ. ಎರಡು ಡೋಸ್ ಲಸಿಕೆ ಪಡೆಯುವ ಅಗತ್ಯವಿದೆ. ಮೊದಲ ಹಂತದಲ್ಲಿ 3 ಕೋಟಿ ಜನರಿಗೆ ಲಸಿಕೆ ಹಾಕಲಾಗುವುದು ಎಂದು ತಿಳಿಸಿದರು.
ಇಷ್ಟು ದಿನ ಒಂದು ಲಸಿಕೆ ಅಭಿವೃದ್ಧಿಗೆ ಹಲವು ವರ್ಷಗಳು ಬೇಕಿತ್ತು. ಆದರೆ ಈಗ ಕೆಲವೇ ದಿನಗಳಲ್ಲಿ ಲಸಿಕೆ ಅಭಿವೃದ್ಧಿಗೊಂಡಿದೆ. ಮನುಷ್ಯ ಪರಿಶ್ರಮ ಹಾಕಿದರೆ ಕಲ್ಲು ಕೂಡ ನೀರಾಗುತ್ತದೆ ಎಂಬುದಕ್ಕೆ ಇದು ಸಾಕ್ಷಿ ಎಂದು ಹೇಳಿದರು.