ಭೋಪಾಲ್: ಆಸ್ತಿ ವಿವಾದ, ಕೌಟುಂಬಿಕ ಕಲಹಗಳಿಗಾಗಿ ಮಕ್ಕಳು ನ್ಯಾಯಾಲಯದ ಮೆಟ್ಟಿಲೇರುವುದನ್ನು ಕಂಡಿದ್ದೇವೆ. ಕೇಳಿದ್ದೇವೆ. ಆದರೆ ಇಲ್ಲೊಬ್ಬ ಯುವತಿ ಗೇಮ್ ಗಾಗಿ ತಂದೆಯ ವಿರುದ್ಧ ಕೋರ್ಟ್ ಮೆಟ್ಟಿಲೇರಿರುವ ಘಟನೆ ನಡೆದಿದೆ. ಅಚ್ಚರಿ ಎನಿಸಿದರೂ ಇದು ನಿಜ.
ಹೌದು, ಲೂಡೋ ಆನ್ ಲೈನ್ ಗೇಮ್ ನಲ್ಲಿ ತನ್ನ ತಂದೆ ತನ್ನನ್ನು ಸೋಲಿಸಿದ್ದಾರೆ ಎಂದು ಬೇಸರಗೊಂಡ ಮಗಳೊಬ್ಬಳು ಅಪ್ಪನ ವಿರುದ್ಧ ಕೋರ್ಟ್ ಮೊರೆ ಹೋಗಿದ್ದಾಳೆ. ಮಧ್ಯಪ್ರದೇಶದ ಭೋಪಾಲ್ ನಲ್ಲಿ ಈ ಘಟನೆ ನಡೆದಿದೆ.
ಕೊರೊನಾ ಲಾಕ್ ಡೌನ್ ನಿಂದಾಗಿ ಮನೆಯಲ್ಲಿಯೇ ಉಳಿದುಕೊಳ್ಳಬೇಕಾದ ಪರಿಸ್ಥಿತಿಗೆ ಸಿಲುಕಿದ್ದ ಜನರಲ್ಲಿ ಹಲವರು ಆನ್ ಲೈನ್ ಗೇಮ್ ಗಳನ್ನು ಆಡುತ್ತಾ ಕಾಲಕಳೆದಿದ್ದಾರೆ. ಹೀಗೆ ಭೋಪಾಲ್ ನಲ್ಲಿ ತಂದೆ ಮಗಳಿಬ್ಬರೂ ಮನೆಯಲ್ಲಿ ಲೂಡೋ ಗೇಮ್ ಆಡಿದ್ದಾರೆ. ಈ ಗೇಮ್ ನಲ್ಲಿ ತಂದೆ ತನಗೆ ಮೋಸ ಮಾಡಿದ್ದಾರೆ. ಆಟದಲ್ಲಿ ತನ್ನನ್ನು ಸೋಲಿಸಿದ್ದಾರೆ ಎಂದು ಬೇಸರಗೊಂಡು 24 ವರ್ಷದ ಯುವತಿ ಕೌಟುಂಬಿಕ ನ್ಯಾಯಾಲಯದ ಮೆಟ್ಟಿಲೇರಿದ್ದಾಳೆ.
ಈ ಬಗ್ಗೆ ಕೌಟುಂಬಿಕ ನ್ಯಾಯಾಲಯದ ವಕೀಲೆ ಸರಿತಾ ಎಂಬುವವರು ಮಾಹಿತಿ ನೀಡಿದ್ದು, ಲೂಡೋ ಗೇಮ್ ನಲ್ಲಿ ತಂದೆ ತನ್ನನ್ನು ಸೋಲಿಸಿದರು. ಇದರಿಂದ ತನಗೆ ತಂದೆಯ ಮೇಲಿನ ನಂಬಿಕೆ ಸಂಪೂರ್ಣ ನಾಶವಾಗಿದೆ. ನನ್ನ ಸಂತೋಷಕ್ಕಾಗಿ ತಂದೆ ಅಟದಲ್ಲಿ ಸೋಲಬಹುದಿತ್ತು. ಆದರೆ ಅವರು ಹಾಗೆ ಮಾಡಿಲ್ಲ, ಬದಲಾಗಿ ನನ್ನನ್ನು ಸೋಲಿಸಿದರು. ನನಗೆ ತಂದೆ ಮೇಲೆ ವಿಶ್ವಾಸ ಮೂಡುತ್ತಿಲ್ಲ. ಹೀಗಾಗಿ ನಾನು ಅವರ ಸಂಬಂಧ ಕಡಿದುಕೊಳ್ಳಲು ನಿರ್ಧರಿಸಿದ್ದೇನೆ ಎಂದು ಕೋರ್ಟ್ ಗೆ ಬಂದಿದ್ದಾಳೆ.
ಆಕೆ ಲೂಡೋ ಗೇಮ್ ನ್ನು ಹಾಗೂ ಆಟದಲ್ಲಿ ತಾನು ತಂದೆಯಿಂದ ಸೋತಿರುವುದನ್ನು ಮನಸ್ಸಿಗೆ ಹಚ್ಚಿಕೊಂಡಿದ್ದಳು. ಮಾನಸಿಕವಾಗಿ ತುಂಬಾ ನೊಂದಿದ್ದಳು. ಆಕೆ ನಿರ್ಧಾರವನ್ನು ಕಂಡು ಬಾರ್ ಕೌನ್ಸಿಲ್ ನಿಂದ ನಾಲ್ಕು ಬಾರಿ ಆಕೆಯ ಮನವೊಲಿಕೆ ಯತ್ನ ಮಾಡಲಾಗಿದೆ. ಸಧ್ಯ ಯುವತಿ ಧನಾತ್ಮಕವಾಗಿ ಯೋಚಿಸುತ್ತಿದ್ದು, ತಂದೆಯ ಮೇಲಿನ ದ್ವೇಷದ ಭಾವನೆಯನ್ನು ಬದಲಿಸಿಕೊಳ್ಳುತ್ತಿದ್ದಾಳೆ ಎಂದು ಹೇಳಿದ್ದಾರೆ.