ದೇಶದಲ್ಲಿ ಆರ್ಭಟಿಸುತ್ತಿರುವ ಕೊರೊನಾ ನಿಯಂತ್ರಣಕ್ಕಾಗಿ ಕೇಂದ್ರ ಸರ್ಕಾರ ಲಾಕ್ ಡೌನ್ ಜಾರಿಗೊಳಿಸಿದ ಬಳಿಕ ದೇಶಿಯ ಹಾಗು ಅಂತರರಾಷ್ಟ್ರೀಯ ವಿಮಾನ ಸಂಚಾರ ಸ್ಥಗಿತಗೊಂಡಿತ್ತು. ಆ ಬಳಿಕ ಲಾಕ್ ಡೌನ್ ಸಡಿಲಿಕೆ ಮಾಡಲಾಗಿದ್ದು, ದೇಶೀಯ ವಿಮಾನ ಸಂಚಾರ ಆರಂಭಗೊಂಡಿತ್ತು.
ಆದರೆ ಇದೀಗ ದೇಶದಲ್ಲಿ ಕೊರೊನಾ ಸೋಂಕು ಪೀಡಿತರ ಸಂಖ್ಯೆ ದಿನೇ ದಿನೇ ಭಾರಿ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಕೆಲ ರಾಜ್ಯಗಳು ದೇಶೀಯ ವಿಮಾನ ಸಂಚಾರಕ್ಕೂ ಬ್ರೇಕ್ ಹಾಕಿದ್ದವು. ಇದರ ಮಧ್ಯೆ ವಿದೇಶಗಳಲ್ಲಿ ಸಿಲುಕಿದ್ದ ಭಾರತೀಯರನ್ನು ಕರೆತರಲು ‘ವಂದೇ ಭಾರತ್ ಮಿಷನ್’ ಆರಂಭಿಸಲಾಗಿತ್ತು.
ನಾಲ್ಕನೇ ಹಂತದ ‘ವಂದೇ ಭಾರತ್ ಮಿಷನ್’ ಜುಲೈ 31ಕ್ಕೆ ಪೂರ್ಣಗೊಳ್ಳುತ್ತಿದ್ದು, ಹೀಗಾಗಿ ಆಗಸ್ಟ್ ತಿಂಗಳಿನಿಂದ ಅಂತರರಾಷ್ಟ್ರೀಯ ವಿಮಾನ ಸಂಚಾರ ಆರಂಭಿಸುವ ಕುರಿತು ನಾಗರಿಕ ವಿಮಾನಯಾನ ಮಹಾ ನಿರ್ದೇಶನಾಲಯ ಚಿಂತನೆ ನಡೆಸಿದೆ.
ಅಮೆರಿಕಾ, ಫ್ರಾನ್ಸ್, ಗಲ್ಫ್ ರಾಷ್ಟ್ರಗಳು ಸೇರಿದಂತೆ ಕೆಲ ದೇಶಗಳಿಗೆ ಮಾತ್ರ ವಿಮಾನ ಸಂಚಾರ ನಡೆಯಲಿದ್ದು, ಅದಕ್ಕೂ ಮುನ್ನ ಒಪ್ಪಂದ ಮಾಡಿಕೊಂಡು ಬಳಿಕ ಸಂಚಾರ ಆರಂಭವಾಗಲಿದೆ ಎಂದು ಹೇಳಲಾಗಿದೆ.