ಕೊರೊನಾ ವೈರಸ್ ಗಾಳಿಯಲ್ಲಿ ಹರಡುತ್ತೆ ಎನ್ನುವ ಬಗ್ಗೆ ಸಾಕಷ್ಟು ಚರ್ಚೆಯಾಗಿದೆ. ಇತ್ತೀಚಿಗೆ ನಡೆದ ಅಧ್ಯಯನವೊಂದರಲ್ಲಿ ಇದಕ್ಕೆ ಪುರಾವೆ ಸಿಕ್ಕಿದೆ. ಆಸ್ಪತ್ರೆ ವಾರ್ಡ್ ನ ಗಾಳಿಯಲ್ಲಿ ಕೋವಿಡ್ -19 ವೈರಸ್ ಕಂಡು ಬಂದಿದೆ. ಗಾಳಿಯಲ್ಲಿ ವೈರಸ್ 2 ಗಂಟೆಗಳಿಗಿಂತ ಹೆಚ್ಚು ಕಾಲ ಉಳಿಯಬಹುದು ಎಂಬುದು ಅಧ್ಯಯನದಿಂದ ಪತ್ತೆಯಾಗಿದೆ.
ಸಾಮಾನ್ಯ ವಾರ್ಡ್‌ಗಳಿಗೆ ಹೋಲಿಸಿದರೆ ಕೋವಿಡ್ ವಾರ್ಡ್‌ನ ಗಾಳಿಯಲ್ಲಿ ಕೊರೊನಾ ವೈರಸ್ ಕಣಗಳು ಹೆಚ್ಚಿರುತ್ತವೆ ಎಂದು ಸೆಲ್ಯುಲಾರ್ ಮತ್ತು ಆಣ್ವಿಕ ಜೀವಶಾಸ್ತ್ರ ಕೇಂದ್ರ ಮತ್ತು ಸಿಎಸ್‌ಐಆರ್ ಇನ್ಸ್ಟಿಟ್ಯೂಟ್ ಆಫ್ ಮೈಕ್ರೋಬಿಯಲ್ ಟೆಕ್ನಾಲಜಿ ನಡೆಸಿದ ಅಧ್ಯಯನಗಳು ಬಹಿರಂಗಪಡಿಸಿವೆ.
ಕೊರೊನಾ ರೋಗಿಗಳಿರುವ ರೂಮಿನ ಗಾಳಿಯಲ್ಲಿ ವೈರಸ್ ಗಳು ರೋಗಿಯಿಂದ 2 ಮೀಟರ್ ಅಂತರದವರೆಗೆ ಇರುತ್ತದೆ. ರೋಗ ಲಕ್ಷಣವಿಲ್ಲದ ರೋಗಿಗಳಿಗಿಂತ ರೋಗ ಲಕ್ಷಣವಿರುವ ರೋಗಿಗಳಿಂದ ವೈರಸ್ ಬೇಗ ಹರಡುತ್ತದೆ ಎಂದು ಅಧ್ಯಯನದಲ್ಲಿ ಹೇಳಲಾಗಿದೆ.