ತಿರುವನಂತಪುರಂ: ಪ್ರಸಿದ್ಧ ಯಾತ್ರಾಸ್ಥಳ ಶಬರಿಮಲೆ ಅಯ್ಯಪ್ಪಸ್ವಾಮಿ ದೇವಾಲಯದ ಬಾಗಿಲು ಬರೋಬ್ಬರಿ 7 ತಿಂಗಳ ಬಳಿಕ ತೆರೆದಿದ್ದು, ಇಂದಿನಿಂದ ಭಕ್ತರಿಗೆ ಅಯ್ಯಪ್ಪ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.
ಕೊರೊನಾ ಹಿನ್ನೆಲೆಯಲ್ಲಿ ಕೋವಿಡ್ ನಿಯಮಾನುಸಾರವಾಗಿ ಪ್ರತಿ ದಿನ 250 ಭಕ್ತರಿಗೆ ಮಾತ್ರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಈಗಾಗಲೇ ಹಲವು ಭಕ್ತರು ಅಯ್ಯಪ್ಪ ಸ್ವಾಮಿ ದರ್ಶನ ಪಡೆದಿದ್ದಾರೆ. ದೇವಾಲಯದಲ್ಲಿ ಸಾಮಾಜಿಕ ಅಂತರ, ಮಾಸ್ಕ್ ಹಾಗೂ ಕೊವಿಡ್ ಟೆಸ್ಟ್ ಕಡ್ಡಾಯವಾಗಿದ್ದು, ನೆಗೆಟಿವ್ ವರದಿ ಬಂದವರಿಗೆ ಮಾತ್ರ ದೇವಾಲಯ ಪ್ರವೇಶಕ್ಕೆ ಅವಕಾಶ ನೀಡಲಾಗುತ್ತಿದೆ.
ಭಕ್ತರು ಪಂಪಾ ನದಿಯಲ್ಲಿ ಸ್ನಾನ ಮಾಡುವುದನ್ನು ನಿರ್ಬಂಧಿಸಲಾಗಿದ್ದು, ನದಿಯಲ್ಲಿ ಸ್ನಾನದ ಬದಲಾಗಿ ಏರುಮಲೈನಲ್ಲಿ ಶವರ್ ವ್ಯವಸ್ಥೆ ಮಾಡಲಾಗಿದೆ. ದೇವಾಲಯದ ಆವರಣದಲ್ಲಿ ರಾತ್ರಿ ಭಕ್ತರು ತಂಗಲು ಅವಕಾಶವಿಲ್ಲ. ನೆಯ್ಯಭಿಷೇಕ ಹಾಗೂ ಅನ್ನದಾನ ಸೇವೆಗಳಿಗೆ ಕೊರೊನಾ ನಿಯಮಾನುಸಾರ ವ್ಯವಸ್ಥೆ ಮಾಡಲಾಗಿದೆ. ಇಂದಿನಿಂದ ಐದು ದಿನಗಳ ಕಾಲ ಮಾತ್ರ ದೇವಾಲಯದ ಬಾಗಿಲು ತೆರೆಯಲಿದ್ದು, ಅಕ್ಟೋಬರ್ 21ರವರೆಗೆ ದೇವಾಲಯದಲ್ಲಿ ವಿಶೇಷ ಪೂಜೆಗಳು ನಡೆಯಲಿದೆ.