ಕೋಟ್ಯಾಂತರ ಭಾರತೀಯರ ಬಹುದಿನಗಳ ಕನಸು ಈಡೇರುವ ಗಳಿಗೆ ಹತ್ತಿರವಾಗಿದೆ. ಅಯೋಧ್ಯೆಯಲ್ಲಿ ಭವ್ಯವಾದ ರಾಮ ಮಂದಿರ ನಿರ್ಮಾಣಕ್ಕೆ ಪ್ರಧಾನಿ ನರೇಂದ್ರ ಮೋದಿಯವರು ಇಂದು ಶುಭ ಮುಹೂರ್ತದಲ್ಲಿ ಶಿಲಾನ್ಯಾಸ ನೆರವೇರಿಸಲಿದ್ದು, ಇದಕ್ಕಾಗಿ ಈಗಾಗಲೇ ಸಕಲ ಸಿದ್ಧತೆ ನಡೆದಿದೆ.
ನರೇಂದ್ರ ಮೋದಿಯವರು ಶಿಲಾನ್ಯಾಸ ನೆರವೇರಿಸುವ ಮುನ್ನ ಅಯೋಧ್ಯೆಯ ಹನುಮಾನ್ ಗಲ್ಲಿಯಲ್ಲಿರುವ ರಾಮನ ಬಂಟ ಹನುಮಂತನ ದೇಗುಲದಲ್ಲಿ ಮೊದಲು ವಿಶೇಷ ಪೂಜೆ ಸಲ್ಲಿಸಲಿದ್ದಾರೆ. ಈ ಮೊದಲಿನಿಂದಲೂ ಯಾವುದೇ ಶುಭ ಸಮಾರಂಭಗಳು ನಡೆಯುವ ಮುನ್ನ ಹನುಮಂತನ ದೇಗುಲದಲ್ಲಿ ಪೂಜೆ ನಡೆಯುವುದು ವಾಡಿಕೆಯಾಗಿದೆ ಎಂದು ಹೇಳಲಾಗಿದೆ.
ಹನುಮಂತನ ಭಕ್ತಿಗೆ ಮೆಚ್ಚಿ ಶ್ರೀ ರಾಮಚಂದ್ರ ಪ್ರಭುವೇ ಇಂತಹುದೊಂದು ಆಶೀರ್ವಾದ ಮಾಡಿದ್ದರೆನ್ನಲಾಗಿದ್ದು, ಹೀಗಾಗಿಯೇ ಅಯೋಧ್ಯೆಯಲ್ಲಿ ಯಾವುದೇ ಶುಭ ಸಮಾರಂಭಗಳು ಆರಂಭವಾಗುವ ಮುನ್ನ ಹನುಮಂತನ ದೇಗುಲದಲ್ಲಿ ಪೂಜೆ ನೆರವೇರಿಸಲಾಗುತ್ತದೆ. ಇಂದು ಪ್ರಧಾನಿ ನರೇಂದ್ರ ಮೋದಿಯವರೂ ಸಹ ಮೊದಲಿಗೆ ಹನುಮನ ದೇಗುಲದಲ್ಲಿ ಪೂಜೆ ಸಲ್ಲಿಸಿ ಬಳಿಕ ಶ್ರೀ ರಾಮ ಮಂದಿರ ನಿರ್ಮಾಣ ಕಾರ್ಯಕ್ಕೆ ಶಿಲಾನ್ಯಾಸ ನೆರವೇರಿಸಲಿದ್ದಾರೆ.