ದೇಶದಲ್ಲಿ ಕೊರೊನಾ ಮಹಾಮಾರಿ ಆರ್ಭಟ ನಡೆಸುತ್ತಿದ್ದು, ಲಕ್ಷಾಂತರ ಮಂದಿ ಸೋಂಕು ಪೀಡಿತರಾಗಿದ್ದಾರೆ. ಇದರ ನಿಯಂತ್ರಣಕ್ಕಾಗಿ ಕೇಂದ್ರ ಸರ್ಕಾರ ಲಾಕ್ ಡೌನ್ ಜಾರಿಗೊಳಿಸಿತ್ತಾದರೂ ಬಳಿಕ ಸಡಿಲಿಕೆ ಮಾಡಿ ವ್ಯಾಪಾರ – ವಹಿವಾಟುಗಳಿಗೆ ಅನುವು ಮಾಡಿಕೊಟ್ಟಿದೆ.
ಅಲ್ಲದೆ ತಿಂಗಳಾನುಗಟ್ಟಲೇ ಬಂದ್ ಆಗಿದ್ದ ಧಾರ್ಮಿಕ ಮಂದಿರಗಳನ್ನು ತೆರೆಯಲು ಅವಕಾಶ ಕಲ್ಪಿಸಿಕೊಟ್ಟಿದ್ದು, ಹೀಗಾಗಿ ವಿಶ್ವದ ಅತಿ ಸಿರಿವಂತ ದೇವರು ಎಂದೇ ಖ್ಯಾತಿಯಾಗಿರುವ ತಿರುಪತಿ ತಿಮ್ಮಪ್ಪನ ದೇಗುಲವನ್ನು ಭಕ್ತರ ದರ್ಶನಕ್ಕಾಗಿ ತೆರೆಯಲಾಗಿದೆ.
ಜೂನ್ 11ರಿಂದ ತಿಮ್ಮಪ್ಪನ ದರ್ಶನಕ್ಕೆ ಭಕ್ತರು ಆಗಮಿಸುತ್ತಿದ್ದು, ಒಂದು ತಿಂಗಳ ಅವಧಿಯಲ್ಲಿ ಸುಮಾರು 2.5 ಲಕ್ಷ ಭಕ್ತರು ದೇವಾಲಯಕ್ಕೆ ಭೇಟಿ ನೀಡಿದ್ದಾರೆ. ಇದರ ಮಧ್ಯೆ ಶನಿವಾರದಂದು ಹುಂಡಿ ಎಣಿಕೆ ಕಾರ್ಯ ನಡೆದಿದ್ದು, ಈ ಸಂದರ್ಭದಲ್ಲಿ ಅಪರಿಚಿತ ಭಕ್ತರೊಬ್ಬರು ಸುಮಾರು ಎರಡು ಕೆಜಿ ತೂಕವಿರುವ 20 ಚಿನ್ನದ ಬಿಸ್ಕತ್ತುಗಳನ್ನು ಹುಂಡಿಗೆ ಹಾಕಿರುವುದು ಕಂಡುಬಂದಿದೆ.