ಕೊರೊನಾ ನಿಯಂತ್ರಣಕ್ಕಾಗಿ ದೇಶದಾದ್ಯಂತ ಕಂಪ್ಲೀಟ್ ಲಾಕ್ ಡೌನ್ ಜಾರಿಗೊಳಿಸಿದ್ದ ಕೇಂದ್ರ ಸರ್ಕಾರ ಆ ಬಳಿಕ ಹಂತ ಹಂತವಾಗಿ ಒಂದೊಂದೇ ನಿರ್ಬಂಧಗಳನ್ನು ತೆಗೆದು ಹಾಕುತ್ತಿದೆ. ಇದೀಗ ಅನ್ಲಾಕ್ 5 ಮಾರ್ಗಸೂಚಿ ಹೊರಡಿಸಲಾಗಿದ್ದು, ಅದು ಇಂದಿನಿಂದಲೇ ಜಾರಿಗೆ ಬರಲಿದೆ.
ಈ ಮಾರ್ಗಸೂಚಿ ಪ್ರಕಾರ ಅಕ್ಟೋಬರ್ 15ರಿಂದ ಶಾಲಾ – ಕಾಲೇಜು, ಕೋಚಿಂಗ್ ಸೆಂಟರ್ ಆರಂಭಕ್ಕೆ ಗ್ರೀನ್ ಸಿಗ್ನಲ್ ನೀಡಲಾಗಿದ್ದು, ಆದರೆ ವಿದ್ಯಾರ್ಥಿಗಳು ತರಗತಿಗಳಿಗೆ ಹಾಜರಾಗಲು ಪೋಷಕರ ಒಪ್ಪಿಗೆ ಕಡ್ಡಾಯವಾಗಿರುತ್ತದೆ. ಒಂದು ವೇಳೆ ವಿದ್ಯಾರ್ಥಿಗಳು ಆನ್ಲೈನ್ ಮೂಲಕ ಕಲಿಯಲು ಬಯಸಿದರೆ ಅದಕ್ಕೂ ಅವಕಾಶ ನೀಡಬೇಕೆಂದು ಸೂಚಿಸಲಾಗಿದೆ.
ಚಿತ್ರಮಂದಿರಗಳನ್ನು ಶೇಕಡಾ 50ರಷ್ಟು ಪ್ರೇಕ್ಷಕರೊಂದಿಗೆ ಆರಂಭಿಸಲು ಅನುಮತಿ ನೀಡಲಾಗಿದ್ದು, ಅಕ್ಟೋಬರ್ 15ರಿಂದ ಇವುಗಳು ಪ್ರದರ್ಶನ ಆರಂಭಿಸಲಿವೆ. ತರಬೇತಿಗಾಗಿ ಈಜುಕೊಳ ಕಾರ್ಯಾರಂಭಕ್ಕೆ ಒಪ್ಪಿಗೆ ನೀಡಲಾಗಿದ್ದು, ಮನೋರಂಜನಾ ಪಾರ್ಕ್ ಸಹ ತೆರೆಯಲಿವೆ.
ಪ್ರಸ್ತುತ ಮನರಂಜನೆ, ಸಾಂಸ್ಕೃತಿಕ, ಧಾರ್ಮಿಕ, ರಾಜಕೀಯ ಕಾರ್ಯಕ್ರಮಗಳಲ್ಲಿ ಗರಿಷ್ಠ 100 ಜನ ಭಾಗವಹಿಸಬಹುದು ಎಂದು ಅನುಮತಿ ನೀಡಲಾಗಿದ್ದು, ಈ ಸಂಖ್ಯೆಯನ್ನು ಹೆಚ್ಚಿಸುವ ಕುರಿತಂತೆ ಅಕ್ಟೋಬರ್ 15ರ ವೇಳೆಗೆ ನಿರ್ಧಾರ ಪ್ರಕಟವಾಗಲಿದೆ.
ಇನ್ನುಳಿದಂತೆ ರೈಲು ಸೇವೆ ಸಂಪೂರ್ಣವಾಗಿ ಆರಂಭಿಸದಿರಲು ತೀರ್ಮಾನಿಸಲಾಗಿದ್ದು, ವಿಶೇಷ ರೈಲು ಮತ್ತು ಗುರುತಿಸಿದ ಮಾರ್ಗಗಳಲ್ಲಿ ಮಾತ್ರ ಸೀಮಿತ ರೈಲುಗಳ ಸಂಚಾರ ನಡೆಸುತ್ತವೆ. ಇನ್ನುಳಿದಂತೆ ಪೂರ್ಣಪ್ರಮಾಣದಲ್ಲಿ ಈಜುಕೊಳ ಸದ್ಯಕ್ಕೆ ಆರಂಭವಾಗುವುದಿಲ್ಲವಾಗಿದ್ದು, ಅಂತರಾಷ್ಟ್ರೀಯ ವಿಮಾನ ಯಾನದ ಮೇಲಿನ ನಿರ್ಬಂಧವೂ ಸಹ ಅಕ್ಟೋಬರ್ 31ರವರೆಗೆ ಮುಂದುವರೆಯಲಿದೆ.