ಪ್ರಕೃತಿ ವಿಸ್ಮಯಗಳ ಆಗರ. ಇಲ್ಲಿ ನಡೆಯುವ ಕೆಲವೊಂದು ವಿದ್ಯಮಾನಗಳು ಯಾರ ಊಹೆಗೂ ನಿಲುಕುವುದಿಲ್ಲ. ಈಗ ಇಂತಹುದೇ ಒಂದು ಅಚ್ಚರಿಯ ಘಟನೆ ಮಹಾರಾಷ್ಟ್ರದ ಬುಲ್ದಾನಾ ಜಿಲ್ಲೆಯಲ್ಲಿ ನಡೆದಿದ್ದು, ಪ್ರಕೃತಿ ಪ್ರಿಯರು ಹಾಗೂ ವಿಜ್ಞಾನಿಗಳಲ್ಲಿ ಸೋಜಿಗ ಉಂಟುಮಾಡಿದೆ.
ಉಲ್ಕಾಪಾತದ ಪರಿಣಾಮ ಸುಮಾರು 50 ಸಾವಿರ ವರ್ಷಗಳ ಹಿಂದೆ ನಿರ್ಮಾಣವಾಗಿದೆ ಎಂದು ಅಂದಾಜಿಸಲಾಗಿರುವ ಲೋನಾರ್ ಸರೋವರದ ನೀರು ಈಗ ಗುಲಾಬಿ ಬಣ್ಣಕ್ಕೆ ತಿರುಗಿದ್ದು, ನೀರಿನಲ್ಲಿ ಮೂಡಿರುವ ಪಾಚಿಯಿಂದ ಇಂತಹ ವಿದ್ಯಾಮಾನ ಸಂಭವಿಸಿರಬಹುದೆಂದು ತಜ್ಞರು ಹೇಳುತ್ತಿದ್ದಾರೆ.
ಪ್ರವಾಸಿ ತಾಣವಾಗಿರುವ ಈ ಸರೋವರ ಈ ವಿಸ್ಮಯದಿಂದಾಗಿ ಈಗ ಎಲ್ಲರನ್ನೂ ಸೆಳೆಯುತ್ತಿದ್ದು, ಇದನ್ನು ನೋಡಲು ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಆಗಮಿಸುತ್ತಿದ್ದಾರೆ. ಸುಮಾರು 1.2 ಕಿಲೋ ಮೀಟರ್ ವಿಸ್ತೀರ್ಣದಲ್ಲಿ ಸರೋವರದಲ್ಲಿನ ನೀರು ಗುಲಾಬಿ ಬಣ್ಣಕ್ಕೆ ತಿರುಗಿದೆ ಎಂದು ಹೇಳಲಾಗಿದೆ.