ಬುಧವಾರದಂದು ಅಯೋಧ್ಯೆಯಲ್ಲಿ ಭವ್ಯವಾದ ರಾಮಮಂದಿರ ನಿರ್ಮಾಣಕ್ಕಾಗಿ ಭೂಮಿ ಪೂಜೆ ನಡೆದಿದ್ದು, ಪ್ರಧಾನಿ ನರೇಂದ್ರ ಮೋದಿಯವರು ಶಿಲಾನ್ಯಾಸ ನೆರವೇರಿಸಿದ್ದಾರೆ. ಕೊರೊನಾ ಕಾರಣಕ್ಕೆ ಅಸಂಖ್ಯಾತ ಭಕ್ತರಿಗೆ ಅಯೋಧ್ಯೆಗೆ ತೆರಳಲು ಸಾಧ್ಯವಾಗಲಿಲ್ಲವಾದರೂ ದೂರದರ್ಶನದಲ್ಲಿ ಪ್ರಸಾರವಾದ ನೇರ ದೃಶ್ಯಾವಳಿಗಳನ್ನು ಕಣ್ತುಂಬಿಸಿಕೊಂಡು ಧನ್ಯರಾಗಿದ್ದಾರೆ.
ಬಹಳಷ್ಟು ಮಂದಿ ಮನೆಯಲ್ಲಿಯೇ ಕುಳಿತು ರಾಮನಾಮ ಜಪ ಮಾಡಿ ಸಿಹಿ ಮಾಡಿಕೊಂಡು ಸವಿದಿದ್ದಾರೆ. ಇದರ ಮಧ್ಯೆ ಮಂಡ್ಯದ ರಾಮಭಕ್ತರು ಮಾಡಿರುವ ಕಾರ್ಯವೊಂದು ಎಲ್ಲರ ಗಮನ ಸೆಳೆದಿದೆ. ಮಂಡ್ಯ ತಾಲೂಕು ಬಿಜೆಪಿ ಉಪಾಧ್ಯಕ್ಷ ಶಿವಕುಮಾರ್ ಆರಾಧ್ಯ ಹಾಗೂ ಮಂಡ್ಯ ನಗರ ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ ಹೊಸಹಳ್ಳಿ ಶಿವು ಇಂತಹದೊಂದು ಸಾರ್ಥಕ ಸೇವೆ ಮಾಡಿದ್ದಾರೆ.
25 ಕೆಜಿ ತೂಕದ ಸೈಜುಗಲ್ಲನ್ನು (ದಿಂಡು) ಖರೀದಿಸಿ ಅದನ್ನು ನುಣುಪಾಗಿಸಿರುವುದಲ್ಲದೆ ಅದರ ಮೇಲೆ ‘ಶ್ರೀ ರಾಮ’ನ ಹೆಸರನ್ನು ಕೆತ್ತನೆ ಮಾಡಿಸಿದ್ದಾರೆ. ಬಳಿಕ 2407 ರೂ. ಖರ್ಚು ಮಾಡಿ ಸ್ಪೀಡ್ ಪೋಸ್ಟ್ ಮೂಲಕ ಇದನ್ನು ಅಯೋಧ್ಯೆಗೆ ಕಳುಹಿಸಿಕೊಟ್ಟಿದ್ದಾರೆ. ಇದನ್ನು ಕಳುಹಿಸುವ ಮುನ್ನ ಆಂಜನೇಯಸ್ವಾಮಿ ದೇವಾಲಯದಲ್ಲಿ ಪೂಜೆ ನೆರವೇರಿಸಿದ್ದಾರೆ.