ದೇಶದಲ್ಲಿ ಕೊರೊನಾ ವೈರಸ್ ಬಿಕ್ಕಟ್ಟಿನ ಮಧ್ಯೆ ಆಯುರ್ವೇದ ಹಾಗೂ ಅಲೋಪತಿ ನಡುವಿನ ವಿವಾದ ನಿರಂತರವಾಗಿ ನಡೆಯುತ್ತಿದೆ. ಭಾರತೀಯ ವೈದ್ಯಕೀಯ ಸಂಸ್ಥೆಯಿಂದ ನೊಟೀಸ್ ಪಡೆದ ನಂತ್ರ ಮೊದಲ ಬಾರಿ ಯೋಗಗುರು ಬಾಬಾ ರಾಮ್ದೇವ್ ಪ್ರತಿಕ್ರಿಯೆ ನೀಡಿದ್ದಾರೆ.
ಗಂಭೀರ ಕಾಯಿಲೆಯ ಶೇಕಡಾ 10 ಮಂದಿಗೆ ಮಾತ್ರ ಅಲೋಪತಿಯಿಂದ ಚಿಕಿತ್ಸೆ ನೀಡಲಾಗಿದೆ. ಉಳಿದ ಶೇಕಡಾ 90ರಷ್ಟು ಮಂದಿ ಯೋಗ-ಆಯುರ್ವೇದದಿಂದ ಗುಣಮುಖರಾಗಿದ್ದಾರೆಂದು ರಾಮ್ದೇವ್ ಹೇಳಿದ್ದಾರೆ. ಕೊರೊನಾ ಬಿಕ್ಕಟ್ಟಿನಲ್ಲಿರುವ ಜನರಿಗೆ ಯೋಗ ಮತ್ತು ಪ್ರಕೃತಿ ಚಿಕಿತ್ಸೆಯ ಅಗತ್ಯ ಹೆಚ್ಚಿದೆ. ಯೋಗ ಮತ್ತು ಪ್ರಕೃತಿ ಚಿಕಿತ್ಸೆಯು ಲಕ್ಷಾಂತರ ಜನರ ಪ್ರಾಣವನ್ನು ಉಳಿಸಿದೆ.
ದುರ್ಬಲ ಶ್ವಾಸಕೋಶಗಳು, ದುರ್ಬಲ ಯಕೃತ್ತು-ಹೃದಯ, ದುರ್ಬಲ ರೋಗನಿರೋಧಕ ಶಕ್ತಿ, ದುರ್ಬಲ ನರಮಂಡಲ, ದುರ್ಬಲ ಆತ್ಮ ಸ್ಥೈರ್ಯ ಈ ರೋಗದ ದೊಡ್ಡ ಕಾರಣಗಳು. ದುರಾದೃಷ್ಟವಶಾತ್ ಅಲೋಪತಿಯಲ್ಲಿ ಇದಕ್ಕೆ ಯಾವುದೇ ಚಿಕಿತ್ಸೆಯಿಲ್ಲ. ಸಿಂಪ್ಟೋಮ್ಯಾಟಿಕ್ ಟ್ರೀಟ್ಮೆಂಟ್ ಮಾತ್ರ ಮಾಡುತ್ತಿದ್ದಾರೆಂದು ರಾಮ್ದೇವ್ ಹೇಳಿದ್ದಾರೆ.
ವೈದ್ಯರು ರೋಗಿಗಳಿಗೆ ಸಾಕಷ್ಟು ನೆರವಾಗಿದ್ದಾರೆ. ಆದ್ರೆ ವೈದ್ಯರು ಮಾತ್ರ ರೋಗ ಗುಣಪಡಿಸಿಲ್ಲ. ಇದ್ರಲ್ಲಿ ರೋಗಿಗಳ ಪಾತ್ರವೂ ಇದೆ. ಪ್ರಕೃತಿ ಚಿಕಿತ್ಸೆ, ಯೋಗ ಅವರು ಗುಣಮುಖರಾಗಲು ನೆರವಾಗಿದೆ. ಯೋಗ ಮತ್ತು ಮನೆಮದ್ದುಗಳು ಆಮ್ಲಜನಕದ ಮಟ್ಟ 70 ಕ್ಕೆ ತಲುಪಿದವರನ್ನು ಗುಣಪಡಿಸಿದೆ ಎಂದು ರಾಮ್ದೇವ್ ಹೇಳಿದ್ದಾರೆ.