ಕೊರೊನಾದಿಂದಾಗಿ ಸಾವಿರಾರು ಜನ ಸಾವನ್ನಪ್ಪಿದ್ದಾರೆ. ರೋಗ ನಿರೋಧಕ ಶಕ್ತಿ ಹೆಚ್ಚಿದ್ದವರಲ್ಲಿ ಕೊರೊನಾ ಕಾಣಿಸುತ್ತಿಲ್ಲ. ಒಂದು ವೇಳೆ ಕೊರೊನಾ ವೈರಸ್ ತಗುಲಿದರೂ ರೋಗ ನಿರೋಧಕ ಶಕ್ತಿಯಿಂದ ಬಚಾವ್ ಆಗುತ್ತಿದ್ದಾರೆ. ಹೀಗಾಗಿ ಎಲ್ಲರಲ್ಲೂ ರೋಗ ನಿರೋಧಕ ಶಕ್ತಿ ಹೆಚ್ಚಿಸಬೇಕು ಎಂಬ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಹೊಸ ಯೋಜನೆ ಜಾರಿಗೆ ತಂದಿದೆ.
ಹೌದು, ರೋಗ ನಿರೋಧಕ ಶಕ್ತಿ ಹೆಚ್ಚು ಮಾಡುವುದಕ್ಕೆ ಪೌಷ್ಟಿಕಾಂಶ ಆಹಾರ ಮುಖ್ಯವಾಗಿದೆ. ಸರಿಯಾದ ರೀತಿಯಲ್ಲಿ ಪೌಷ್ಟಿಕಾಂಶ ಆಹಾರ ಅಥವಾ ಪೌಷ್ಟಿಕ ಔಷಧಗಳನ್ನು ತಿನ್ನುವುದು ಬಡವರಿಗೆ ಕೊಂಚ ಕಷ್ಟದ ಸಂಗತಿಯೇ. ಹೀಗಾಗಿ ಬಡವರಿಗೂ ಪೌಷ್ಟಿಕತೆ ಸಿಗಬೇಕು ಅವರಲ್ಲಿಯೂ ರೋಗ ನಿರೋಧಕ ಶಕ್ತಿ ಹೆಚ್ಚಾಗಬೇಕು ಎಂಬ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಜನೌಷಧ ಮಳಿಗೆಗಳಲ್ಲಿ ಪೂರಕ ಪೌಷ್ಟಿಕಾಂಶವುಳ್ಳ ಔಷಧಗಳನ್ನು ಮಾರಾಟ ಮಾಡುತ್ತಿದೆ.
ಪೂರಕ ಪೌಷ್ಟಿಕಾಂಶ ಹೊಂದಿರುವ ಎಂಟು ಉತ್ಪನ್ನಗಳನ್ನು ಇತ್ತೀಚೆಗೆ ಕೇಂದ್ರ ಸರ್ಕಾರ ಬಿಡುಗಡೆ ಮಾಡಿದೆ. ಈ ಉತ್ಪನ್ನಗಳನ್ನ ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಡಿ.ವಿ. ಸದಾನಂದಗೌಡ ಬಿಡುಗಡೆ ಮಾಡಿದರು. ಕಡಿಮೆ ದರಕ್ಕೆ ಈ ಔಷಧ ಉತ್ಪನ್ನಗಳು ಸಿಗಲಿವೆ. ಜನರಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚು ಮಾಡಿದರೆ ಯಾವುದೇ ರೋಗದಿಂದಲೂ ದೂರ ಇರಬಹುದು ಎಂಬ ಉದ್ದೇಶದಿಂದ ಈ ಕೆಲಸ ಕೈಗೆತ್ತಿಕೊಳ್ಳಲಾಗಿದೆ.