ನವದೆಹಲಿ: ಭಾರತ ಮತ್ತು ನೇಪಾಳ ಗುರುವಾರ ಮೂರು ಸಮುದಾಯ ಅಭಿವೃದ್ಧಿ ಯೋಜನೆಗಳನ್ನು (ಎಚ್ಐಸಿಡಿಪಿ) ಕೈಗೊಳ್ಳಲು ತಿಳುವಳಿಕಾ ಒಡಂಬಡಿಕೆಗೆ ಸಹಿ ಹಾಕಿದವು. ಈ ಮೂರು ಯೋಜನೆಗಳು ನೇಪಾಳದ ಶಿಕ್ಷಣ, ಆರೋಗ್ಯ ಮತ್ತು ಸಂಸ್ಕೃತಿ ಕ್ಷೇತ್ರಕ್ಕೆ ಸಂಬಂಧಿಸಿದ್ದು, ಅಂದಾಜು ವೆಚ್ಚ 762 ಕೋಟಿ ರೂ.ಆಗಿದೆ.
ಇಲ್ಲಿನ ಭಾರತೀಯ ರಾಯಭಾರ ಕಚೇರಿ ಮತ್ತು ನೇಪಾಳದ ಫೆಡರಲ್ ವ್ಯವಹಾರಗಳು ಮತ್ತು ಸಾಮಾನ್ಯ ಆಡಳಿತ ಸಚಿವಾಲಯವು ಮೂರು ಯೋಜನೆಗಳಿಗಾಗಿ ತಿಳುವಳಿಕಾ ಒಡಂಬಡಿಕೆಗೆ ಸಹಿ ಹಾಕಿದವು. ಈ ಯೋಜನೆಗಳಿಗೆ ಭಾರತ ಸರ್ಕಾರವು ಆರ್ಥಿಕ ನೆರವು ನೀಡಲಿದೆ.
ಈ ಮೂರು ಯೋಜನೆಗಳಲ್ಲಿ ಪಿಯುಥಾನ್ ಜಿಲ್ಲೆಯ ಐರಾವತಿ ಗ್ರಾಮೀಣ ಪುರಸಭೆಯ ಡಾಂಗ್-ಬಾಂಗ್ ಸೆಕೆಂಡರಿ ಶಾಲೆಗೆ ಶಾಲೆ ಮತ್ತು ಹಾಸ್ಟೆಲ್ ಕಟ್ಟಡಗಳ ನಿರ್ಮಾಣವೂ ಸೇರಿದೆ. ಇತರ ಯೋಜನೆಗಳಲ್ಲಿ ಖಮ್ಲಾಲುಂಗ್ ಆರೋಗ್ಯ ಪೋಸ್ಟ್ ಕಟ್ಟಡ ನಿರ್ಮಾಣ, ಟೆರತುಮ್ ಜಿಲ್ಲೆಯ ಅಥರೈ ಗ್ರಾಮೀಣ ಪುರಸಭೆಯಲ್ಲಿ ನಿರ್ಮಾಣ ಮತ್ತು ಮೂಲಸೌಕರ್ಯ ಅಭಿವೃದ್ಧಿ ಮತ್ತು ಕಠ್ಮಂಡುವಿನ ಚಂದ್ರಗಿರಿ ಪುರಸಭೆಯಲ್ಲಿ ಚಂದನ್ ಭರತೇಶ್ವರ ಮಹಾದೇವ್ ದೇವಾಲಯ ಸೇರಿವೆ.