ಸದಾ ಒಂದಿಲ್ಲ ಒಂದು ವಿವಾದ ಮಾಡಿಕೊಳ್ಳುವ ಓವೈಸಿ ಈಗ ದೇಶದ ಕುರಿತು ಇನ್ನೊಂದು ಕಿಡಿ ಹೊತ್ತಿಸಿದ್ದಾರೆ. ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ (ಎಐಎಂಐಎಂ) ಮುಖ್ಯಸ್ಥ ಅಸಾದುದ್ದೀನ್ ಓವೈಸಿ, ಮುಂದಿನ ಲೋಕಸಭೆ ಚುನಾವಣೆಯ ನಂತರ ಭಾರತಕ್ಕೆ ದುರ್ಬಲ ಪ್ರಧಾನಿ ಮತ್ತು “ಖಿಚಡಿ” ಅಥವಾ ಬಹು-ಪಕ್ಷದ ಸರ್ಕಾರವನ್ನು ಭಾರತ ಹೊಂದಿರಬೇಕು ಎಂದು ಹೇಳಿದ್ದಾರೆ.
ಶಕ್ತಿಶಾಲಿ ಪ್ರಧಾನಿ ಶಕ್ತಿಯುತ ವ್ಯಕ್ತಿಗಳಿಗೆ ಮಾತ್ರ ಸಹಾಯ ಮಾಡುತ್ತಾರೆ, ಬಹು ಪಕ್ಷದ ಸರ್ಕಾರ ಬಂದರೆ ಸಮಾಜದ ಹಲವು ವರ್ಗಗಳು ಪ್ರಯೋಜನ ಪಡೆಯುತ್ತವೆ ಎಂದು ಹೇಳಿದರು.
ಆಮ್ ಆದ್ಮಿ ಪಕ್ಷದ ಮೇಲೆಯೂ ಓವೈಸಿ ವಾಗ್ದಾಳಿ ನಡೆಸಿದ್ದು, ಗುಜರಾತ್ನಲ್ಲಿ ಆಡಳಿತಾರೂಢ ಭಾರತೀಯ ಜನತಾ ಪಕ್ಷಕ್ಕಿಂತ ಎಎಪಿ ಭಿನ್ನವಾಗಿಲ್ಲ ಎಂದು ಹೇಳಿದರು.
ಬಿಲ್ಕಿಸ್ ಬಾನೋ ಪ್ರಕರಣದಲ್ಲಿ ಅಪರಾಧಿಗಳ ವಿವಾದಾತ್ಮಕ ಬಿಡುಗಡೆಯ ಬಗ್ಗೆ ಎಎಪಿ ಮೌನ ವಹಿಸಿದೆ ಎಂಬುದು ಅವರ ಆರೋಪ. ಬಲಿಷ್ಠ ಪ್ರಧಾನಿ ವಿಚಾರದ ಬಗ್ಗೆ ಪತ್ರಕರ್ತರು ಪ್ರಶ್ನಿಸಿದಾಗ, ದೇಶಕ್ಕೆ ಈಗ ದುರ್ಬಲ ಪ್ರಧಾನಿ ಬೇಕು ಎಂದು ನಾನು ನಂಬುತ್ತೇನೆ. ನಾವು ಶಕ್ತಿಯುತ ಪ್ರಧಾನಿಯನ್ನು ನೋಡಿದ್ದೇವೆ, ಈಗ ನಮಗೆ ದುರ್ಬಲ ಪ್ರಧಾನಿ ಬೇಕು, ಅವರು ಸಹಾಯ ಮಾಡಬಹುದು. ದೇಶಕ್ಕೆ ʼಖಿಚಡಿʼ ಸರ್ಕಾರದ ಅಗತ್ಯವಿದೆ ಎಂದರು.
ನಿತೀಶ್ ಕುಮಾರ್ ವಿರುದ್ಧವೂ ವಾಗ್ದಾಳಿ ನಡೆಸಿದ ಓವೈಸಿ, 2002 ರ ಗುಜರಾತ್ ದಂಗೆ ನಡೆದಾಗ ಬಿಹಾರ ಮುಖ್ಯಮಂತ್ರಿ ಬಿಜೆಪಿಯ ಮಿತ್ರರಾಗಿದ್ದರು, ಕೇಸರಿ ಪಕ್ಷದೊಂದಿಗೆ ಕೈಜೋಡಿಸಿದ್ದರು. ಹೆಚ್ಚಿನ ರಾಜಕೀಯ ಪಕ್ಷಗಳು ಹಣದುಬ್ಬರ, ನಿರುದ್ಯೋಗದ ಸಮಸ್ಯೆಗಳನ್ನು ಬದಿಗಿಟ್ಟು ಹಿಂದುತ್ವ ಸಿದ್ಧಾಂತದ ದೊಡ್ಡ ಧ್ವಜಧಾರಿಗಳಾಗಲು ಸ್ಪರ್ಧಿಸುತ್ತಿವೆ ಎಂದರು.