ಮುಂಬೈ: ಇಂಡಿಯಾ (INDIA- ಇಂಡಿಯನ್ ನ್ಯಾಷನಲ್ ಡೆವಲಪ್‌ಮೆಂಟಲ್ ಇನ್‌ಕ್ಲೂಸಿವ್ ಅಲೈಯನ್ಸ್) ಬ್ಲಾಕ್‌ನ ಮೂರನೇ ಸಭೆಗಾಗಿ ಮುಂಬೈಗೆ ಬಂದಿಳಿದ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಗುರುವಾರ ಮುಂಬೈನ ಗ್ರ್ಯಾಂಡ್ ಹಯಾತ್ ಹೋಟೆಲ್‌ಗೆ ಪ್ರವೇಶಿಸಿದಾಗ ಕುಂಕುಮ (ಸ್ವಾಗತ ಸೂಚಕ) ಹಾಕಲು ನಿರಾಕರಿಸಿದರು. ಘಟನೆಯ ವಿಡಿಯೋ ಇದೀಗ ವ್ಯಾಪಕವಾಗಿ ವೈರಲ್ ಆಗುತ್ತಿದೆ.
ವಿಡಿಯೋದಲ್ಲಿ ಮಮತಾ ಕೈಮುಗಿದು ಹೊಟೇಲ್‌ಗೆ ಆಗಮಿಸಿದ್ದು, ಅವರನ್ನು ಆತ್ಮೀಯವಾಗಿ ಸ್ವಾಗತಿಸುತ್ತಿರುವುದನ್ನು ಕಾಣಬಹುದು. ಈ ವೇಳೆ, ಹೋಟೆಲ್ ಸಿಬ್ಬಂದಿ ಪಶ್ಚಿಮ ಬಂಗಾಳದ ಮುಖ್ಯಮಂತ್ರಿಗೆ ಆರತಿ ಎತ್ತಿ ಕುಂಕುಮ ಹಾಕಲು ಮುಂದಾದ್ರು. ಆದರೆ, ಇದನ್ನು ಸಿಎಂ ಮಮತಾ ಬ್ಯಾನರ್ಜಿ ನಯವಾಗಿ ಬೇಡ ಎಂದು ತಿರಸ್ಕರಿಸಿದ್ರು. ಈ ಘಟನೆಯ ವಿಡಿಯೋ ವೈರಲ್ ಆಗಿದ್ದು, ಪಶ್ಚಿಮ ಬಂಗಾಳದ ಬಿಜೆಪಿ ನಾಯಕರು ಕೂಡ ಇದನ್ನು ಹಂಚಿಕೊಂಡಿದ್ದಾರೆ.
ಉದ್ಧವ್ ಠಾಕ್ರೆಗೆ ರಾಖಿ ಕಟ್ಟಿದ ಮಮತಾ:
ಇದಕ್ಕೂ ಮುನ್ನ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಅವರು ಶಿವಸೇನೆ ಯುಬಿಟಿ ಮುಖ್ಯಸ್ಥ ಉದ್ಧವ್ ಠಾಕ್ರೆ ಅವರಿಗೆ ರಾಖಿ ಕಟ್ಟಿದ ಚಿತ್ರ ವೈರಲ್ ಆಗಿತ್ತು. ಇಂಡಿಯಾ ಬ್ಲಾಕ್‌ನ 28 ಪಕ್ಷಗಳ ಸಭೆಗಾಗಿ ಮುಂಬೈನಲ್ಲಿರುವ ಪಶ್ಚಿಮ ಬಂಗಾಳ ಸಿಎಂ, ರಕ್ಷಾ ಬಂಧನದ ಸಂದರ್ಭದಲ್ಲಿ ಠಾಕ್ರೆ ಅವರ ನಿವಾಸ ಮಾತೋಶ್ರೀಗೆ ಭೇಟಿ ನೀಡಿ ಉದ್ಧವ್‌ಗೆ ರಾಖಿ ಕಟ್ಟಿದ್ರು.
ಮುಂಬೈನಲ್ಲಿ ಇಂಡಿಯಾ ಸಭೆ
ಮುಂಬೈನಲ್ಲಿ ಮೂರನೇ ʼಇಂಡಿಯಾʼ ಸಭೆ ನಡೆಯುತ್ತಿದೆ. ಎರಡು ದಿನಗಳ ಸಭೆಯಲ್ಲಿ (ಆಗಸ್ಟ್ 31-ಸೆಪ್ಟೆಂಬರ್ 1) ಪಕ್ಷಗಳು ಮೈತ್ರಿಯ ಲೋಗೋವನ್ನು ಅನಾವರಣಗೊಳಿಸಲಾಗುತ್ತದೆ. ಶುಕ್ರವಾರ (ಸೆಪ್ಟೆಂಬರ್ 1) ಮಧ್ಯಾಹ್ನ 3.30ಕ್ಕೆ ಪತ್ರಿಕಾಗೋಷ್ಠಿ ನಡೆಯಲಿದ್ದು, 2024ರ ಸಾರ್ವತ್ರಿಕ ಚುನಾವಣೆಗೆ ಮುನ್ನ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರವನ್ನು ಎದುರಿಸಲು ಮೈತ್ರಿಕೂಟದ ಪಾಲುದಾರರು ರೂಪಿಸಿರುವ ಕಾರ್ಯತಂತ್ರದ ಕುರಿತು ಮಾತನಾಡಲಿದ್ದಾರೆ.