ನವದೆಹಲಿ: ಆಗಸ್ಟ್ ವೇಳೆಗೆ ಭಾರತಕ್ಕೆ ನಾಲ್ಕನೇ ಕೋವಿಡ್-19 ಲಸಿಕೆ ಸಿಗಬಹುದು ಎಂದು ಸರ್ಕಾರದ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಈ ವರ್ಷದ ಆಗಸ್ಟ್ ವೇಳೆಗೆ ಹೈದರಾಬಾದ್ ಮೂಲದ ಬಯಾಲಜಿಕಲ್ ಲಿಮಿಟೆಡ್ ನ ಸ್ಥಳಿಯ ಕೋವಿಡ್-19 ಲಸಿಕೆ ಲಭ್ಯವಾಗಲಿದೆ. ಒಂದು ಮತ್ತು ಎರಡನೇ ಹಂತದ ಪ್ರಯೋಗ ಹಂತದಲ್ಲಿದ್ದು, ಮೂರನೇ ಹಂತದ ಪ್ರಯೋಗಕ್ಕೆ ಸಿದ್ಧತೆ ಕೈಗೊಳ್ಳಲಾಗಿದೆ. 70 ಮಿಲಿಯನ್ ಲಸಿಕೆ ಸಾಮರ್ಥ್ಯ ಹೊಂದಿರುವುದರಿಂದ ಇದು ಮಹತ್ವದ ಬೆಳವಣಿಗೆಯಾಗಿದೆ ಎಂದು ನೀತಿ ಆಯೋಗದ ಸದಸ್ಯ ಡಾ.ವಿ.ಕೆ. ಪೌಲ್ ಹೇಳಿದ್ದಾರೆ.
ಕ್ವಾಡ್ ಲಸಿಕೆ ಸಹಭಾಗಿತ್ವದಡಿಯಲ್ಲಿ ಜಾನ್ಸನ್ ಮತ್ತು ಜಾನ್ಸನ್ ಅಭಿವೃದ್ಧಿಪಡಿಸಿದ ಕೋವಿಡ್ -19 ಲಸಿಕೆಯನ್ನು ಬಯಾಲಜಿಕಲ್ ಇ ಲಿಮಿಟೆಡ್ ತಯಾರಿಸಲಿದೆ. ಯುನೈಟೆಡ್ ಸ್ಟೇಟ್ಸ್ ನ ಡೆವಲಪ್ಮೆಂಟ್ ಫೈನಾನ್ಸ್ ಕಾರ್ಪೊರೇಷನ್ ಮೂಲಕ ಬಯಾಲಾಜಿಕಲ್ ಇ ಲಿಮಿಟೆಡ್ ಕೆಲಸ ಮಾಡಲಿದೆ. 2022 ರ ಅಂತ್ಯದ ವೇಳೆಗೆ ಕನಿಷ್ಠ ಒಂದುಬಿಲಿಯನ್ ಲಸಿಕೆ ಉತ್ಪಾದಿಸುವ ಯೋಜನೆ ಇದೆ.
ಗುಜರಾತ್ ಮೂಲದ ಜೈಡುಸ್ ಕ್ಯಾಡಿಲಾ ಲಸಿಕೆ ಆಗಸ್ಟ್ ವೇಳೆಗೆ ಬರುವ ಸಾಧ್ಯತೆ ಇದೆ. ಭಾರತದಲ್ಲಿ ಪ್ರಸ್ತುತ ಮೂರು ಲಸಿಕೆಗಳ ಬಳಕೆಗೆ ಅನುಮೋದನೆ ನೀಡಲಾಗಿದೆ. ಸೀರಮ್ ಇನ್ ಸ್ಟಿಟ್ಯೂಟ್ ಆಫ್ ಇಂಡಿಯಾ ಮತ್ತು ಭಾರತ್ ಬಯೋಟೆಕ್ ಲಸಿಕೆಗಳ ಜೊತೆಗೆ ವಿದೇಶದ ಸ್ಪುಟ್ನಿಕ್ ಲಸಿಕೆ ಬಳಕೆಗೆ ಅನುಮತಿ ನೀಡಲಾಗಿದೆ.