ಭಯೋತ್ಪಾದಕ ಸಂಘಟನೆಗಳ ಕಾರ್ಯಾಚರಣೆಯನ್ನು ಹತ್ತಿಕ್ಕಲು ಹಾಗೂ ಇದನ್ನು ಅಂತ್ಯಗೊಳಿಸಲು ಭಾರತ ಸರ್ಕಾರ 2021 ರಲ್ಲಿ ಮಹತ್ವದ ಪ್ರಯತ್ನ ಮಾಡಿದೆ ಎಂದು ಅಮೆರಿಕಾದ ಭಯೋತ್ಪಾದನಾ ನಿಗ್ರಹದ ವಾರ್ಷಿಕ ವರದಿ ತಿಳಿಸಿದೆ.
ಜೂನ್ 2021 ರಲ್ಲಿ ಜಮ್ಮು ವಾಯುಪಡೆಯ ನಿಲ್ದಾಣದ ತಾಂತ್ರಿಕ ಪ್ರದೇಶದಲ್ಲಿ ಡ್ರೋನ್ ಬಳಸಿ ಸ್ಫೋಟ ನಡೆಸುವುದೂ ಸೇರಿದಂತೆ ನಾಗರಿಕರ ವಿರುದ್ಧ ದಾಳಿ ನಡೆಸಲು ಭಯೋತ್ಪಾದಕರ ತಂಡ ಯೋಜನೆ ರೂಪಿಸಿತ್ತು ಎನ್ನಲಾಗಿದೆ.
ಅಮೆರಿಕಾದ ಭಯೋತ್ಪಾದನಾ ನಿಗ್ರಹ ವರದಿಯ ಪ್ರಕಾರ, ಲಷ್ಕರ್-ಎ-ತೈಬಾ, ಜೈಶ್-ಎ-ಮೊಹಮ್ಮದ್, ಹಿಜ್ಬುಲ್ ಮುಜಾಹಿದ್ದೀನ್, ಐಸಿಸ್, ಅಲ್-ಖೈದಾ, ಜಮಾತ್-ಉಲ್-ಮುಜಾಹಿದ್ದೀನ್, ಮತ್ತು ಜಮಾತ್-ಉಲ್-ಮುಜಾಹಿದ್ದೀನ್ ಬಾಂಗ್ಲಾದೇಶವು ಭಾರತದಲ್ಲಿ ಸಕ್ರಿಯವಾಗಿರುವ ಭಯೋತ್ಪಾದಕ ಗುಂಪುಗಳಾಗಿವೆ.
‘ಭಯೋತ್ಪಾದನೆ 2021: ಭಾರತ’ ಎಂಬ ಬಿಡುಗಡೆಯಾಗಿರುವ ಈ ವರದಿಯಲ್ಲಿ ಭಯೋತ್ಪಾದನೆ ಮಟ್ಟ ಹಾಕಲು ಭಾರತ ಅಮೆರಿಕಾದೊಂದಿಗೆ ಯಾವ ರೀತಿ ಸಹಕರಿಸಿತು ಎಂಬುದನ್ನು ವಿವರಿಸಲಾಗಿದೆ. ಅಲ್ಲದೇ ಮಾಹಿತಿ ಕೋರಿದ ಸಂದರ್ಭದಲ್ಲಿ ಭಾರತದಿಂದ ತಕ್ಷಣ ಸ್ಪಂದನೆ ಸಿಕ್ಕಿದೆ ಎಂದು ವರದಿಯಲ್ಲಿ ಹೇಳಲಾಗಿದೆ.
ವರದಿಯಲ್ಲಿ ಭಾರತೀಯ ಕಾನೂನು ಜಾರಿ ಸಂಸ್ಥೆಗಳು ಎದುರಿಸುತ್ತಿರುವ ಬಜೆಟ್, ಸಿಬ್ಬಂದಿ ಮತ್ತು ಸಲಕರಣೆಗಳ ಕೊರತೆಗಳನ್ನೂ ಎತ್ತಿ ತೋರಿಸಿದ್ದು, ಕಡಲ ಮತ್ತು ಭೂ ಗಡಿಗಳಲ್ಲಿ ಗಸ್ತು ತಿರುಗುವ ಮತ್ತು ಸುರಕ್ಷಿತಗೊಳಿಸುವ ಸಾಮರ್ಥ್ಯವು ಸುಧಾರಿಸುತ್ತಿದ್ದರೂ, ಕರಾವಳಿ ಪ್ರದೇಶದಲ್ಲಿ ಅದು ಸಮರ್ಪಕವಾಗಿಲ್ಲ ಎಂದು ಹೇಳಿದೆ.
2021 ರಲ್ಲಿ, ಜಮ್ಮು ಮತ್ತು ಕಾಶ್ಮೀರದಲ್ಲಿ 153 ಭಯೋತ್ಪಾದಕ ದಾಳಿ ವರದಿಯಾಗಿದ್ದು, 274 ಸಾವುಗಳಿಗೆ ಕಾರಣವಾಯಿತು. ಈ ಪೈಕಿ 45 ಭದ್ರತಾ ಸಿಬ್ಬಂದಿ ಹುತಾತ್ಮರಾಗಿದ್ದು, 36 ನಾಗರಿಕರು ಮತ್ತು 193 ಭಯೋತ್ಪಾದಕರು ಸಾವಿಗೀಡಾಗಿದ್ದಾರೆ ಎಂದು ತಿಳಿಸಲಾಗಿದೆ.