ನವದೆಹಲಿ: ದೇಶೀಯವಾಗಿ ಅಭಿವೃದ್ಧಿಪಡಿಸಲಾಗುತ್ತಿರುವ ಕೊರೋನಾ ಲಸಿಕೆ ಕೋವ್ಯಾಕ್ಸಿನ್ ಫೆಬ್ರವರಿ ವೇಳೆಗೆ ಬಿಡುಗಡೆಯಾಗುವ ಸಾಧ್ಯತೆ ಇದೆ. ಪ್ರಯೋಗದ ಸಂದರ್ಭದಲ್ಲಿ ಲಸಿಕೆ ಪರಿಣಾಮಕಾರಿಯಾಗಿದೆ ಮತ್ತು ಸುರಕ್ಷಿತವಾಗಿದೆ ಎನ್ನುವುದು ಗೊತ್ತಾಗಿದೆ.
ಅಂತಿಮ ಹಂತದ ಪ್ರಯೋಗ ಇದೇ ತಿಂಗಳು ಆರಂಭವಾಗಲಿದೆ. ಐಸಿಎಂಆರ್ ನ ಹಿರಿಯ ವಿಜ್ಞಾನಿ ಈ ಕುರಿತಂತೆ ಮಾಹಿತಿ ನೀಡಿದ್ದು, ಭಾರತ್ ಬಯೋಟೆಕ್ ಕಂಪನಿಯೊಂದಿಗೆ ಐಸಿಎಂಆರ್ ಅಭಿವೃದ್ಧಿಪಡಿಸುತ್ತಿರುವ ಫೆಬ್ರವರಿ ವೇಳೆಗೆ ಬಿಡುಗಡೆಯಾಗಲಿದೆ ಎಂದು ಹೇಳಿದ್ದಾರೆ.
ಐಸಿಎಂಆರ್ ವಿಜ್ಞಾನಿ ರಜನಿಕಾಂತ್ ಅವರು ನೀಡಿರುವ ಮಾಹಿತಿಯಂತೆ, ಪ್ರಯೋಗದ ಸಂದರ್ಭದಲ್ಲಿ ಲಸಿಕೆ ಸುರಕ್ಷಿತ ಮತ್ತು ಪರಿಣಾಮಕಾರಿಯಾಗಿರುವುದು ಗೊತ್ತಾಗಿದೆ. ಅಂತಿಮ ಹಂತದ ಪ್ರಯೋಗ ಪೂರ್ಣಗೊಳ್ಳುವ ಮೊದಲೇ ಕೋವ್ಯಾಕ್ಸಿನ್ ಲಸಿಕೆಯನ್ನು ಜನರಿಗೆ ನೀಡುವ ಬಗ್ಗೆ ಆರೋಗ್ಯ ಸಚಿವಾಲಯ ತೀರ್ಮಾನ ಕೈಗೊಳ್ಳಬೇಕಿದೆ ಎಂದು ಹೇಳಿದ್ದಾರೆ.
ರಾಷ್ಟ್ರೀಯ ಕೋವಿಡ್ ಕಾರ್ಯಪಡೆ ಸದಸ್ಯರೂ ಆಗಿರುವ ರಜನಿಕಾಂತ್, ಮೂರನೇ ಅಂತ ಪ್ರಯೋಗ ಪೂರ್ಣಗೊಂಡ ನಂತರವೇ ಶೇಕಡ 100 ರಷ್ಟು ಖಚಿತತೆ ನೀಡಲು ಸಾಧ್ಯವಾಗುತ್ತದೆ. ತುರ್ತು ಸಂದರ್ಭದಲ್ಲಿ ಕೋವ್ಯಾಕ್ಸಿನ್ ಲಸಿಕೆ ಬಳಸುವ ಕುರಿತಾಗಿ ಸರ್ಕಾರ ತೀರ್ಮಾನ ಕೈಗೊಳ್ಳಬಹುದು ಎಂದು ಅವರು ಎಂದು ಅಭಿಪ್ರಾಯಪಟ್ಟಿದ್ದಾರೆ.