ಪಂಚ ರಾಜ್ಯಗಳ ವಿಧಾನ ಸಭಾ ಚುನಾವಣೆ ಮುಗಿಯುತ್ತಲೇ ಪೆಟ್ರೋಲ್/ಡೀಸೆಲ್ ಬೆಲೆಗಳಲ್ಲಿ ಭಾರೀ ಏರಿಕೆ ಮಾಡಲು ಇಂಧನ ರೀಟೇಲರ್‌ಗಳು ಕಾತರದಿಂದ ಕಾಯುತ್ತಿದ್ದಾರೆ ಎಂದು ಡೆಲಾಯ್ಟ್ ಟಚ್ ಟೊಮಾತ್ಸು ನಿರೀಕ್ಷಿಸಿದೆ.
“ರಾಜ್ಯಗಳ ಚುನಾವಣೆಯ ಕಾರಣದಿಂದ ಅವರು ರೀಟೇಲ್ ಬೆಲೆಗಳಲ್ಲಿ ಏರಿಕೆ ಮಾಡಿಲ್ಲ,” ಎನ್ನುವ ಡೆಲಾಯ್ಟ್‌ನ ಪಾಲುದಾರ ದೇಬಶಿಶ್ ಮಿಶ್ರಾ, ಇಂಧನ ವಿತರಕ ಕಂಪನಿಗಳು ಪ್ರತಿ ಲೀಟರ್‌ಗೆ 8-9 ರೂಪಾಯಿಯಷ್ಟು ಏರಿಕೆ ಮಾಡುವ ಅಂದಾಜು ನೀಡಿದ್ದಾರೆ. ಮಾರ್ಚ್ 10ರಂದು ಚುನಾವಣಾ ಪ್ರಕ್ರಿಯೆಗಳು ಮುಗಿಯುತ್ತಲೇ ಈ ಬೆಲೆ ಏರಿಕೆ ಆಗುವ ಸಾಧ್ಯತೆ ಇದೆ.
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬೆಲೆಗಳ ಏರಿಕೆ ಹೊರತಾಗಿಯೂ ಇಂಡಿಯನ್ ಆಯಿಲ್ ಕಾರ್ಪ್, ಭಾರತ್ ಪೆಟ್ರೋಲಿಯಂ ಕಾರ್ಪ್ ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪ್ ಕಳೆದ ಮೂರು ತಿಂಗಳಿನಿಂದ ಗ್ಯಾಸೋಲಿನ್ ಮತ್ತು ಡೀಸೆಲ್ ಬೆಲೆಗಳಲ್ಲಿ ಏರಿಕೆ ಮಾಡಿಲ್ಲ. ಈ ಕಂಪನಿಗಳು ದೇಶದ ಮಾರುಕಟ್ಟೆಯ 90 ಪ್ರತಿಶತ ಪಾಲು ಹೊಂದಿವೆ.
ಸರ್ಕಾರಿ ಸ್ವಾಮ್ಯದ ಇಂಧನ ವಿತರಕ ಕಂಪನಿಗಳು ಬೆಲೆಗಳ ಏರಿಕೆಯನ್ನು ಜಾಗತಿಕ ಮಾರುಕಟ್ಟೆಗೆ ಅನುಗುಣವಾಗಿ ಮಾಡಲು ಸ್ವತಂತ್ರ‍್ಯ ಹೊಂದಿದ್ದರೂ ಸಹ ಸಾರ್ವಜನಿಕರ ತೀವ್ರ ಪ್ರತಿಕ್ರಿಯೆಯ ಭಯದಲ್ಲಿ ಚುನಾವಣೆಗಳ ಸಂದರ್ಭದಲ್ಲಿ ಇಂಥ ಕೆಲಸ ಮಾಡಲು ಹಿಂದೇಟು ಹಾಕುತ್ತವೆ.
ತೈಲ ಬೆಲೆ ಏರಿಕೆಯಿಂದಾಗಿ ದೇಶದ ವಿತ್ತೀಯ ಶಿಸ್ತಿನ ಮೇಲೆ ನಕಾರಾತ್ಮಕ ಪರಿಣಾಮ ಉಂಟಾಗುವುದರೊಂದಿಗೆ ರೀಟೇಲ್ ಹಣದುಬ್ಬರದ ಮೇಲೂ ಪ್ರತಿಕೂಲ ಪರಿಣಾಮವಾಗುತ್ತದೆ.