alex Certify ಟ್ರಾಫಿಕ್ ನಿಯಮ ಉಲ್ಲಂಘಿಸಿದ್ರೆ ಎಚ್ಚರ; ಕಣ್ಗಾವಲಿರಿಸುತ್ತೆ ಕೃತಕ ಬುದ್ದಿಮತ್ತೆಯ ಕ್ಯಾಮರಾ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಟ್ರಾಫಿಕ್ ನಿಯಮ ಉಲ್ಲಂಘಿಸಿದ್ರೆ ಎಚ್ಚರ; ಕಣ್ಗಾವಲಿರಿಸುತ್ತೆ ಕೃತಕ ಬುದ್ದಿಮತ್ತೆಯ ಕ್ಯಾಮರಾ

ರಸ್ತೆಗಳನ್ನು ಮೇಲ್ವಿಚಾರಣೆ ಮಾಡಲು, ಟ್ರಾಫಿಕ್ ಉಲ್ಲಂಘಿಸುವವರನ್ನು ಪತ್ತೆ ಹಚ್ಚಲು ನೆರೆ ರಾಜ್ಯ ಕೇರಳ 726 ಎಐ ಕ್ಯಾಮೆರಾಗಳನ್ನು ಸ್ಥಾಪಿಸಲಿದೆ. ಏಪ್ರಿಲ್ 20 ರಂದು ಪ್ರಾರಂಭವಾಗುವ ಸುರಕ್ಷಿತ ಕೇರಳ ಯೋಜನೆಯು ದಕ್ಷಿಣ ಭಾರತದ ಕೇರಳ ರಾಜ್ಯದಲ್ಲಿ ಸಂಚಾರ ನಿಯಮಗಳ ಉಲ್ಲಂಘನೆಯನ್ನು ಗುರುತಿಸಲು ಮತ್ತು ದಂಡವನ್ನು ವಿಧಿಸಲು ಕೃತಕ ಬುದ್ಧಿಮತ್ತೆ ಕ್ಯಾಮೆರಾಗಳನ್ನು ಬಳಸುತ್ತದೆ.

ಹೆಲ್ಮೆಟ್ ಇಲ್ಲದೆ ದ್ವಿಚಕ್ರ ವಾಹನವನ್ನು ಓಡಿಸುವುದು, ಎರಡಕ್ಕಿಂತ ಹೆಚ್ಚು ಪ್ರಯಾಣಿಕರೊಂದಿಗೆ ಸವಾರಿ ಮಾಡುವುದು, ಚಾಲನೆ ಮಾಡುವಾಗ ಫೋನ್ ಬಳಸುವುದು ಮತ್ತು ಟ್ರಾಫಿಕ್ ಸಿಗ್ನಲ್ ಬಿದ್ದಾಗ ವೇಗವಾಗಿ ಚಲಿಸುವುದು ಮುಂತಾದವುಗಳನ್ನು ಮಾಡಿದ್ರೆ ಇನ್ಮುಂದೆ ಹುಷಾರಾಗಿರ್ಬೇಕು. ಯಾಕೆಂದ್ರೆ ಕ್ಯಾಮರಾ ಕಣ್ಗಾವಲಿನಲ್ಲಿರುತ್ತದೆ.

ಹೌದು, ಸುರಕ್ಷಿತ ಕೇರಳ ಯೋಜನೆಯ ಭಾಗವಾಗಿ ಕ್ಯಾಮರಾಗಳ ಮೂಲಕ ಕಾನೂನು ಅಪರಾಧಗಳನ್ನು ಪತ್ತೆಹಚ್ಚಲು, ಮೋಟಾರು ವಾಹನ ಇಲಾಖೆಯು ಸಂಪೂರ್ಣ ಸ್ವಯಂಚಾಲಿತ ಸಂಚಾರ ವ್ಯವಸ್ಥೆಯನ್ನು ಜಾರಿಗೆ ತರಲು ನಿರ್ಧರಿಸಿದೆ.

ಈ ಕ್ಯಾಮೆರಾಗಳು ಸೌರಶಕ್ತಿಯಿಂದ ಚಾಲಿತವಾಗಿದ್ದು, ಡೇಟಾವನ್ನು ಕಳುಹಿಸಲು 4ಜಿ ಎಲ್ ಟಿ ಇ ಸಿಮ್ ಅನ್ನು ಬಳಸಲಾಗುತ್ತದೆ. ಕ್ಯಾಮರಾ ಬಾಕ್ಸ್‌ನಲ್ಲಿರುವ ದೃಶ್ಯ ಸಂಸ್ಕರಣಾ ಘಟಕವು ಪ್ರತಿ ವಾಹನವನ್ನು ಪರೀಕ್ಷಿಸುತ್ತದೆ. ಮೋಟಾರು ವಾಹನ ಇಲಾಖೆಯ ನಿಯಂತ್ರಣ ಕೊಠಡಿಯು ಸಂಚಾರ ನಿಯಮ ಉಲ್ಲಂಘಿಸಿದ ವಾಹನಗಳು ಹಾಗೂ ಚಾಲಕನ ಫೋಟೋಗಳನ್ನು ಸ್ವೀಕರಿಸುತ್ತದೆ. ಉಲ್ಲಂಘನೆಯ ದೃಶ್ಯಗಳನ್ನು ಆರು ತಿಂಗಳವರೆಗೆ ಸಂಗ್ರಹಿಸುವ ಸಾಮರ್ಥ್ಯವನ್ನು ಇದು ಹೊಂದಿದೆ. ಮೋಟಾರು ವಾಹನ ಇಲಾಖೆಯ ಪ್ರಕಾರ, ಕಾನೂನು ಉಲ್ಲಂಘಿಸುವವರಿಗೆ ಒಂದೇ ದಿನದಲ್ಲಿ 30,000 ರೂ. ದಂಡದವರೆಗೆ ಪಾವತಿಸಬೇಕಾಗಬಹುದು.

ರಸ್ತೆ ಸುರಕ್ಷತೆಯನ್ನು ಕೇರಳ ಏಕೆ ಗಂಭೀರವಾಗಿ ಪರಿಗಣಿಸಿದೆ ?

ಕೇರಳದಲ್ಲಿ ರಸ್ತೆ ಅಪಘಾತಗಳ ಹೆಚ್ಚಳಕ್ಕೆ ಕಾರಣಗಳೇನೆಂದರೆ ಸುರಕ್ಷತಾ ನಿಯಮಗಳ ಕಳಪೆ ಅನುಸರಣೆ ಮತ್ತು ಮೂಲಸೌಕರ್ಯ ಅಭಿವೃದ್ಧಿ ಅಸಮರ್ಪಕವಾಗಿದೆ. ಅಂಕಿಅಂಶಗಳ ಪ್ರಕಾರ, ಕೇರಳದ ರಸ್ತೆಗಳಲ್ಲಿ ದ್ವಿಚಕ್ರ ವಾಹನಗಳು ಅತ್ಯಂತ ಅಪಾಯಕಾರಿ ಮತ್ತು ದ್ವಿಚಕ್ರ ವಾಹನ ಸವಾರರು ಅಪಘಾತದಲ್ಲಿ ಹೆಚ್ಚು ಗಾಯಗೊಂಡಿದ್ದಾರೆ ಎಂದು ಇಂಡಿಯಾ ಟುಡೇ ವರದಿ ಮಾಡಿದೆ.

ಕೇರಳದಲ್ಲಿ 2022 ರಲ್ಲಿ 13,334 ದ್ವಿಚಕ್ರ ವಾಹನ ಅಪಘಾತಗಳು ವರದಿಯಾಗಿವೆ. ಈ ಅಪಘಾತಗಳು 1,288 ಸಾವುಗಳಿಗೆ ಕಾರಣವಾಗಿವೆ. 2021 ರಲ್ಲಿ 10,154 ದ್ವಿಚಕ್ರ ವಾಹನ ಅಪಘಾತಗಳಲ್ಲಿ 1,069 ಜನರು ಪ್ರಾಣ ಕಳೆದುಕೊಂಡಿದ್ದಾರೆ. ಸರ್ಕಾರಿ ಅಂಕಿಅಂಶಗಳ ಪ್ರಕಾರ, 2022 ರಲ್ಲಿ ರಾಜ್ಯದಲ್ಲಿ ಒಟ್ಟು 43,910 ಟ್ರಾಫಿಕ್ ಅಪಘಾತಗಳಲ್ಲಿ 4,317 ಜನರು ಸಾವನ್ನಪ್ಪಿದ್ದಾರೆ ಮತ್ತು 34,638 ಮಂದಿ ಗಾಯಗೊಂಡಿದ್ದಾರೆ.

2021 ರಲ್ಲಿ ಒಟ್ಟು 33,296 ಅಪಘಾತಗಳು ಸಂಭವಿಸಿದ್ದರೆ 3,429 ಸಾವುಗಳಿಗೆ ಕಾರಣವಾಗಿವೆ. ಅದರಲ್ಲಿ 26,495 ಜನರಿಗೆ ಗಂಭೀರ ಗಾಯಗಳಾಗಿದ್ದರೆ, 10,280 ಜನರಿಗೆ ಸಣ್ಣ-ಪುಟ್ಟ ಗಾಯಗಳಾಗಿವೆ.

ಅಧಿಕಾರಿಗಳ ಪ್ರಕಾರ, ಜನರು ರಸ್ತೆಯ ನಿಯಮಗಳನ್ನು ಅನುಸರಿಸುವುದಿಲ್ಲ ಮತ್ತು ಅಜಾಗರೂಕತೆ (ಉದಾಹರಣೆಗೆ ಕುಡಿದು ವಾಹನ ಚಲಾಯಿಸುವುದು ಅಥವಾ ಚಾಲಕ ನಿರ್ಲಕ್ಷ್ಯ) ಅಪಘಾತಗಳಿಗೆ ಕಾರಣವಾಗುತ್ತದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...