ನವದೆಹಲಿ: ಜನಸಾಮಾನ್ಯರಿಗೆ ಕಡಿಮೆ ದರದಲ್ಲಿ ಗುಣಮಟ್ಟದ ಔಷಧ ವಿತರಿಸುವ ಭಾರತದ ಪಿಎಂ ಜನೌಷಧ ಕೇಂದ್ರ ಪರಿಕಲ್ಪನೆಯನ್ನು ಜಾರಿಗೊಳಿಸಲು ಹತ್ತಕ್ಕೂ ಹೆಚ್ಚು ದೇಶಗಳು ಮುಂದಾಗಿವೆ.
ಭಾರತದ ಹೊರಗೆ ಮೊದಲ ಜನೌಷಧ ಕೇಂದ್ರವನ್ನು ಕಳೆದ ಜುಲೈನಲ್ಲಿ ಮಾರಿಷಸ್ ನಲ್ಲಿ ಆರಂಭಿಸಲಾಗಿತ್ತು. ಶ್ರೀಲಂಕಾ, ಭೂತಾನ್, ಅಫ್ಘಾನಿಸ್ತಾನ, ಸುರಿನಾಂ ಸೇರಿದಂತೆ ಹತ್ತಕ್ಕೂ ಹೆಚ್ಚು ದೇಶಗಳು ಇದೇ ದಾರಿ ತುಳಿಯಲು ಮುಂದಾಗಿವೆ.
ಈಗಾಗಲೇ ಫಿಜಿ ದ್ವೀಪ, ಬುರ್ಕಿನಾಫಾಸೋ ದೇಶಗಳು ಭಾರತ ಸರ್ಕಾರದೊಂದಿಗೆ ಜನೌಷಧಿ ಯೋಜನೆಯ ಬಗ್ಗೆ ಮಾತುಕತೆ ನಡೆಸಿವೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ 2015ರಲ್ಲಿ ಜನೌಷಧಿ ಕೇಂದ್ರ ಯೋಜನೆ ಪುನಾರಂಭ ಮಾಡಿದ್ದು, ಇದುವರೆಗೂ 6100 ಕೋಟಿ ರೂ.ಗಿಂತಲೂ ಅಧಿಕ ಮೌಲ್ಯದ ಔಷಧಗಳನ್ನು ಈ ಮಳಿಗೆಗಳ ಮೂಲಕ ಮಾರಾಟ ಮಾಡಲಾಗಿದೆ. ಕಡಿಮೆ ದರದ ಗುಣಮಟ್ಟದ ಔಷಧದಿಂದ ಜನರಿಗೆ ಔಷಧಗಳ ಖರೀದಿ ವೆಚ್ಚದಲ್ಲಿ ಒಟ್ಟಾರೆ 30,000 ಕೋಟಿ ರೂಪಾಯಿ ಉಳಿತಾಯವಾಗಿದೆ ಎಂದು ಹೇಳಲಾಗಿದೆ.
ಕೇಂದ್ರ ಸರ್ಕಾರ 2025ರ 26ರ ವೇಳೆಗೆ ದೇಶಾದ್ಯಂತ 25000 ಜನೌಷಧ ಕೇಂದ್ರಗಳನ್ನು ತೆರೆಯುವ ಗುರಿ ಹೊಂದಿದೆ. ಜನೌಷಧ ಕೇಂದ್ರಗಳಲ್ಲಿ ಔಷಧಗಳು ಮತ್ತು ವೈದ್ಯಕೀಯ ಉಪಕರಣಗಳು ಅರ್ಧಕ್ಕಿಂತ ಕಡಿಮೆ ಬೆಲೆಯಲ್ಲಿ ದೊರೆಯುತ್ತವೆ. ಹೀಗಾಗಿ ಹತ್ತಕ್ಕೂ ಅಧಿಕ ದೇಶಗಳು ಕೇಂದ್ರದೊಂದಿಗೆ ಮಾತುಕತೆ ನಡೆಸಿವೆ ಎನ್ನಲಾಗಿದೆ.