ಚೀನಾ ನಂತರ ವಿಶ್ವದಲ್ಲೇ ಅತಿ ಹೆಚ್ಚು ಈರುಳ್ಳಿ ಉತ್ಪಾದನೆ ಮಾಡೋದು ಭಾರತದಲ್ಲಿ. ಆದರೂ ಭಾರತದಲ್ಲಿ ಈರುಳ್ಳಿ ಬೆಲೆ ಹೆಚ್ಚಳದ ಆತಂಕ ಎದುರಾಗಿದೆ. ಈ ಹಿನ್ನೆಲೆಯಲ್ಲಿ ದೇಶೀಯ ಲಭ್ಯತೆಯನ್ನು ಹೆಚ್ಚಿಸಲು ಸರ್ಕಾರ ಈರುಳ್ಳಿ ಮೇಲೆ ಶೇ.40 ರಷ್ಟು ರಫ್ತು ಸೆಸ್ ಅನ್ನು ವಿಧಿಸಿದೆ. ಸರಕಾರದ ಅಂಕಿ-ಅಂಶಗಳ ಪ್ರಕಾರ ಈರುಳ್ಳಿಯ ಮೇಲೆ ಇದೇ ಮೊದಲ ಬಾರಿಗೆ ರಫ್ತು ಸೆಸ್ ವಿಧಿಸಲಾಗಿದೆ. ಚಿಲ್ಲರೆ ಮಾರಾಟದ ಈರುಳ್ಳಿ ಬೆಲೆ ದೆಹಲಿಯಲ್ಲಿ ಕೆಜಿಗೆ 37 ರೂಪಾಯಿ ತಲುಪಿದೆ.
ರಾಷ್ಟ್ರೀಯ ಮಟ್ಟದಲ್ಲಿ ಈರುಳ್ಳಿಯ ಸರಾಸರಿ ಚಿಲ್ಲರೆ ಬೆಲೆ ಕೆಜಿಗೆ 30.72 ರೂಪಾಯಿ ಇದೆ. ಇದೀಗ ಡಿಸೆಂಬರ್ 31, 2023 ರವರೆಗೆ ಈರುಳ್ಳಿ ಮೇಲೆ ಶೇ.40 ರಷ್ಟು ರಫ್ತು ಸುಂಕವನ್ನು ವಿಧಿಸಲಾಗುತ್ತದೆ. ಪ್ರಸಕ್ತ ಹಣಕಾಸು ವರ್ಷದಲ್ಲಿ ಏಪ್ರಿಲ್ 1 ರಿಂದ ಆಗಸ್ಟ್ 4 ರ ನಡುವೆ 9.75 ಲಕ್ಷ ಟನ್ ಈರುಳ್ಳಿಯನ್ನು ಭಾರತದಿಂದ ರಫ್ತು ಮಾಡಲಾಗಿದೆ. ಬಾಂಗ್ಲಾದೇಶ, ಮಲೇಷ್ಯಾ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ ಭಾರತದಿಂದ ಹೆಚ್ಹೆಚ್ಚು ಈರುಳ್ಳಿಯನ್ನು ಆಮದು ಮಾಡಿಕೊಳ್ಳುತ್ತವೆ.
ಜುಲೈ ತಿಂಗಳ ಸಗಟು ಬೆಲೆ ಸೂಚ್ಯಂಕ (WPI) ಪ್ರಕಾರ, ಈರುಳ್ಳಿ ಹಣದುಬ್ಬರವು ಜೂನ್ ತಿಂಗಳಲ್ಲಿ (-) 4.31 ಶೇಕಡಾಕ್ಕೆ ಹೋಲಿಸಿದರೆ ಶೇ.7.12 ಕ್ಕೆ ಏರಿದೆ. ಆಹಾರ ಪದಾರ್ಥಗಳ ಬೆಲೆಯಲ್ಲಿನ ತೀವ್ರ ಏರಿಕೆಯಿಂದಾಗಿ ವಾರ್ಷಿಕ ಚಿಲ್ಲರೆ ಅಥವಾ ಗ್ರಾಹಕ ಬೆಲೆ ಹಣದುಬ್ಬರವು ಜುಲೈ ತಿಂಗಳಲ್ಲಿ 15 ತಿಂಗಳಲ್ಲೇ ಗರಿಷ್ಠ ಶೇ.7.44ಕ್ಕೆ ತಲುಪಿದೆ. ಜೂನ್ ತಿಂಗಳಲ್ಲಿ ಈ ಪ್ರಮಾಣ ಶೇ.4.87ರಷ್ಟು ಮಾತ್ರ ಇತ್ತು. ಮೂರು ಲಕ್ಷ ಟನ್ ಈರುಳ್ಳಿಯ ಬಫರ್ ಸ್ಟಾಕ್ ಇದ್ದರೂ ಕಳೆದ ವಾರದಿಂದ ಅದನ್ನು ಅನೇಕ ಪ್ರಮುಖ ಸ್ಥಳಗಳಲ್ಲಿನ ಸಗಟು ಮಾರುಕಟ್ಟೆಗಳಲ್ಲಿ ಬಿಕರಿ ಮಾಡಲಾಗುತ್ತಿದೆ.
ಆಂಧ್ರಪ್ರದೇಶ, ತೆಲಂಗಾಣ, ಹಿಮಾಚಲ ಪ್ರದೇಶ, ದೆಹಲಿಯ ಸಗಟು ಮಂಡಿಗಳಲ್ಲಿ 2000 ಟನ್ ಬಫರ್ ಜೋನ್ ಈರುಳ್ಳಿ ಮಾರಾಟವಾಗಿದೆ. ಬಫರ್ ಈರುಳ್ಳಿಯನ್ನು ಸಾಮಾನ್ಯವಾಗಿ ಆಗಸ್ಟ್ ಮತ್ತು ಸೆಪ್ಟೆಂಬರ್‌ನಿಂದ ಅಕ್ಟೋಬರ್‌ನಲ್ಲಿ ಹೊಸ ಬೆಳೆ ಬರುವವರೆಗೆ ಬಳಸಲಾಗುತ್ತದೆ. ಈರುಳ್ಳಿ ಯಾವಾಗಲೂ ರಾಜಕೀಯವಾಗಿ ಸೂಕ್ಷ್ಮ ವಿಚಾರ. ಈ ವರ್ಷದ ಕೊನೆಯಲ್ಲಿ ಮಧ್ಯಪ್ರದೇಶ, ಛತ್ತೀಸ್‌ಗಢ ಮತ್ತು ತೆಲಂಗಾಣದಂತಹ ಪ್ರಮುಖ ರಾಜ್ಯಗಳಲ್ಲಿ ವಿಧಾನಸಭಾ ಚುನಾವಣೆಗಳನ್ನು ಗಮನದಲ್ಲಿಟ್ಟುಕೊಂಡು ಬೆಲೆ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲಾಗಿದೆ. ಕರ್ನಾಟಕ ಮತ್ತು ಮಹಾರಾಷ್ಟ್ರ ಭಾರತದಲ್ಲಿ ಈರುಳ್ಳಿ ಉತ್ಪಾದಿಸುವ ಪ್ರಮುಖ ರಾಜ್ಯಗಳಾಗಿವೆ. ಸರ್ಕಾರದ ಅಂಕಿ-ಅಂಶಗಳ ಪ್ರಕಾರ, ಮುಂಗಾರು ತಡವಾಗಿ ಬಂದಿದ್ದರಿಂದ ಮಂದಗತಿಯ ಖಾರಿಫ್ ಬಿತ್ತನೆ ಕೂಡ ಈರುಳ್ಳಿ ಬೆಲೆ ಏರಿಕೆಗೆ ಕಾರಣವಾಗಿದೆ.