ಪ್ರಸಕ್ತ ವಿತ್ತೀಯ ವರ್ಷದಲ್ಲಿ ಭಾರತದ ಜಿಡಿಪಿ 9.2% ದರದಲ್ಲಿ ಸಾಧಿಸುವ ಅಂದಾಜಿದ್ದು, ಕೃಷಿ ಕ್ಷೇತ್ರದ ಉತ್ತಮ ಸಾಧನೆ ಮತ್ತು ಉತ್ಪಾದನೆ, ನಿರ್ಮಾಣ ಮತ್ತು ಸೇವಾ ಕ್ಷೇತ್ರಗಳ ಚೇತರಿಕೆಗಳು ಇದಕ್ಕೆ ಕಾರಣವಾಗಿವೆ. ಆದರೂ ಸಹ ಮುಂಬರುವ ತಿಂಗಳುಗಳಲ್ಲಿ ಕೋವಿಡ್‌ನ ಮೂರನೇ ಅಲೆಯಿಂದ ಜಿಡಿಪಿ ಓಟಕ್ಕೆ ಅಡೆತಡೆ ಸೃಷ್ಟಿಸುವ ಸಾಧ್ಯತೆಯೂ ಇದೆ.
ಮಾರ್ಚ್ ಅಂತ್ಯದವರೆಗೂ ಇರಲಿರುವ 2021-22ರ ವಿತ್ತೀಯ ವರ್ಷದ ಸರಾಸರಿ ಜಿಡಿಪಿ ವೃದ್ಧಿ 9.2% ಇದ್ದಲ್ಲಿ, 1988-89ರ ಬಳಿಕ ದೇಶ ಕಂಡ ಅತ್ಯಂತ ವೇಗದ ಜಿಡಿಪಿ ವೃದ್ಧಿ ದರವಾಗಲಿದೆ. 1988-89ರ ವಿತ್ತೀಯ ವರ್ಷದಲ್ಲಿ ದೇಶದ ಜಿಡಿಪಿ 9.6% ದರದಲ್ಲಿ ಪ್ರಗತಿ ಸಾಧಿಸಿತ್ತು.
THANK YOU INDIA: ಜಾಹೀರಾತು ಫಲಕಗಳೊಂದಿಗೆ ಭಾರತ, ಮೋದಿಗೆ ಧನ್ಯವಾದ ಹೇಳಿದ ಕೆನಡಾ
ಸದ್ಯದ ಮಟ್ಟಿನ ಡಾಲರ್ ಮೌಲ್ಯ ಹಾಗೂ ಹಣದುಬ್ಬರದ ಲೆಕ್ಕಾಚಾರದಲ್ಲಿ ದೇಶದ ಜಿಡಿಪಿ ಇಂದಿಗೆ $3.1 ಲಕ್ಷ ಕೋಟಿಯ ಮಟ್ಟದಲ್ಲಿದೆ. ವಿಶ್ವ ಬ್ಯಾಂಕ್ ವರದಿ ಪ್ರಕಾರ 2019ರಲ್ಲಿ $2.9 ಟ್ರಿಲಿಯನ್ ಮುಟ್ಟಿದ್ದ ದೇಶದ ಜಿಡಿಪಿ, ಕೋವಿಡ್ ಹೊಡೆತದಿಂದಾಗಿ 2020ರಲ್ಲಿ $2.7 ಟ್ರಿಲಿಯನ್‌ಗೆ ಕುಸಿದಿತ್ತು. 2020-21ರ ವಿತ್ತೀಯ ವರ್ಷದ ಆರಂಭದಲ್ಲಿ ಕೋವಿಡ್ ಸೋಂಕಿನ ವಿರುದ್ಧ ದೇಶಾದ್ಯಂತ ಕಠಿಣ ಲಾಕ್‌ಡೌನ್ ಘೋಷಿಸಿದ್ದ ಕಾರಣದಿಂದಾಗಿ ಆ ವರ್ಷದ ಜೂನ್ ತ್ರೈಮಾಸಿಕದಲ್ಲಿ ಜಿಡಿಪಿ ಪ್ರಗತಿಯಲ್ಲಿ 24.4%ನಷ್ಟು ದಾಖಲೆಯ ಕುಸಿತ ಕಂಡು ಬಂದಿತ್ತು.
ರಾಷ್ಟ್ರೀಯ ಅಂಕಿಅಂಶ ಕಚೇರಿ (ಎನ್‌ಎಸ್‌ಓ) ದೇಶದ ಜಿಡಿಪಿ ದರವನ್ನು 9.2%ನಷ್ಟು ಅಂದಾಜಿಸಿದ್ದರೆ, ರಿಸರ್ವ್ ಬ್ಯಾಂಕ್ ಇದೇ ಮಟ್ಟವನ್ನು 9.5%ನಲ್ಲಿ ಇಟ್ಟಿದೆ. ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಓ) ಸಹ ಇದೇ ಹಾದಿಯಲ್ಲಿ ದೇಶದ ಜಿಡಿಪಿ ವೃದ್ಧಿ ದರ ಇರುವ ಅಂದಾಜು ಕೊಟ್ಟಿದೆ.
ಈ ಮಟ್ಟದ ಜಿಡಿಪಿ ವೃದ್ಧಿಯಿಂದಾಗಿ ದೊಡ್ಡ ಆರ್ಥಿಕ ಶಕ್ತಿಗಳ ಪೈಕಿ ಅತ್ಯಂತ ವೇಗವಾಗಿ ಪ್ರಗತಿ ಕಾಣುತ್ತಿರುವ ದೇಶವಾಗಿ ಭಾರತ ಕಾಣಿಸಿಕೊಳ್ಳಲಿದೆ.