ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ವಾಸವಾಗಿರುವ ಸ್ಟಾರ್ಟ್ ಅಪ್ ಕಂಪನಿಯೊಂದರ ಸಂಸ್ಥಾಪಕ, ಇತ್ತೀಚೆಗೆ ತಾವು ವಾಕಿಂಗ್ ಹೋದ ಸಂದರ್ಭದಲ್ಲಿ ಆದ ಕಹಿ ಘಟನೆಯನ್ನು ಇಟ್ಟುಕೊಂಡು ಭಾರತ ಸುರಕ್ಷಿತ ದೇಶವಲ್ಲ ಎಂದು ಹೇಳಿದ್ದಾರೆ. ಇದಕ್ಕಾಗಿ ಅವರು ಸಾಮಾಜಿಕ ಜಾಲತಾಣ ಎಕ್ಸ್ (ಈ ಹಿಂದಿನ ಟ್ವಿಟ್ಟರ್) ನಲ್ಲಿ ಸರಣಿ ಪೋಸ್ಟ್ ಗಳನ್ನು ಹಾಕಿದ್ದು, ಇದಕ್ಕೆ ಕಾಮೆಂಟ್ ಗಳ ಸುರಿಮಳೆಯೇ ಹರಿದು ಬಂದಿದೆ.
ಸ್ಟಾರ್ಟ್ ಅಪ್ ಕಂಪನಿ ‘ಲೋಕಲ್ ಪಾಂಡಾ’ ಸಂಸ್ಥಾಪಕ ಧೃವ್ ಭಾಟಿಯಾ ಬೆಂಗಳೂರಿನ ಕೂಡ್ಲು ಗೇಟ್ ಸಮೀಪ ಇರುವ ತಮ್ಮ ಅಪಾರ್ಟ್ಮೆಂಟ್ ನಿಂದ ಇತ್ತೀಚೆಗೆ ವಾಕಿಂಗ್ ಹೋದ ಸಂದರ್ಭದಲ್ಲಿ ಟ್ಯಾಂಕರ್ ಒಂದು ಡಿಕ್ಕಿ ಹೊಡೆಯುತ್ತದೆ ಎನ್ನುವ ರೀತಿಯಲ್ಲಿ ಹಾದುಹೋಗಿದೆ. ಆ ಸಂದರ್ಭದಲ್ಲಿ ಸಿಟ್ಟಿಗೆದ್ದ ಅವರು ಜೋರಾಗಿ ಕೂಗಿದ್ದಾರೆ.
ಆಗ ಟ್ಯಾಂಕರ್ ನಿಧಾನಗೊಳಿಸಿದ ಚಾಲಕ ಅಲ್ಲಿಂದಲೇ ಇವರೊಂದಿಗೆ ಮಾತಿನ ಚಕಮಕಿ ನಡೆಸಿದ್ದು, ದೃವ್ ಭಾಟಿಯಾ ಅವರ ಮೇಲೆ ಮತ್ತೊಮ್ಮೆ ವಾಹನ ಹರಿಸಲು ಯತ್ನಿಸಿದ್ದಾನೆ. ಅದೃಷ್ಟವಶಾತ್ ಅವರು ಸಾವಿನಿಂದ ಪಾರಾಗಿದ್ದು ಈ ಎಲ್ಲ ಘಟನೆಯಿಂದ ಆಘಾತಕ್ಕೊಳಗಾಗಿ ಸುಧೀರ್ಘ ಪೋಸ್ಟ್ ಮೂಲಕ ತಮ್ಮ ನೋವನ್ನು ವ್ಯಕ್ತಪಡಿಸಿದ್ದಾರೆ.
ಇಲ್ಲಿ ಜೀವಕ್ಕೆ ಬೆಲೆಯೇ ಇಲ್ಲ. ಟ್ಯಾಂಕರ್ ಚಾಲಕ ಮಾತಿನ ಚಕಮಕಿ ಬಳಿಕ ಮತ್ತೊಮ್ಮೆ ನನ್ನ ಮೇಲೆ ವಾಹನ ಹರಿಸಲು ಬಂದಾಗ ಒಂದೊಮ್ಮೆ ನಾನು ತಪ್ಪಿಸಿಕೊಳ್ಳದಿದ್ದರೆ ‘ಹಿಟ್ ಅಂಡ್ ರನ್’ ಕೇಸ್ ಪ್ರಕರಣವಾಗುತ್ತಿತ್ತು. ಇದಕ್ಕೆ ಓರ್ವ ವ್ಯಕ್ತಿ ಮಾತ್ರ ಆ ಸಂದರ್ಭದಲ್ಲಿ ಪ್ರತ್ಯಕ್ಷ ಸಾಕ್ಷಿಯಾಗಿದ್ದರು ಎಂದಿದ್ದಾರೆ. ಅವರ ಈ ಪೋಸ್ಟಿಗೆ ಸಾಕಷ್ಟು ಕಮೆಂಟುಗಳು ಹರಿದುಬಂದಿವೆ.