
ಕೊರೊನಾ ವೈರಸ್ ಹೊಸ ಪ್ರಕರಣಗಳ ಸಂಖ್ಯೆ ಕಡಿಮೆಯಾಗಿದೆ. ಆದ್ರೆ ಕೇರಳ ಸೇರಿದಂತೆ ಕೆಲ ರಾಜ್ಯಗಳಲ್ಲಿ ಪರಿಸ್ಥಿತಿ ಚಿಂತಾಜನಕವಾಗಿದೆ. ದೇಶದ ಮೊದಲ ಕೊರೊನಾ ಸೋಂಕಿತೆಗೆ ಮತ್ತೆ ಕೊರೊನಾ ಕಾಣಿಸಿಕೊಂಡಿದೆ. ಕೇರಳದ ತ್ರಿಶೂರ್ ಮೂಲದ ವೈದ್ಯಕೀಯ ವಿದ್ಯಾರ್ಥಿನಿಗೆ ಮತ್ತೆ ಕೊರೊನಾ ಕಾಣಿಸಿಕೊಂಡಿದೆ. ಆಕೆ ಮನೆಯಲ್ಲಿ ಚಿಕಿತ್ಸೆ ನಡೆಯುತ್ತಿದೆ. ಆಕೆ ಜನವರಿ 30, 2020 ರಂದು ಚೀನಾದ ವುಹಾನ್ನಿಂದ ಮರಳಿದ್ದಳು.
ವೈದ್ಯಕೀಯ ವಿದ್ಯಾರ್ಥಿನಿಗೆ ಮತ್ತೆ ಕೊರೊನಾ ಸೋಂಕು ತಗುಲಿದೆ ಎಂದು ತ್ರಿಶೂರ್ ವೈದ್ಯಕೀಯ ಅಧಿಕಾರಿ ಡಾ.ಕೆ.ಜೆ ರೀನಾ ತಿಳಿಸಿದ್ದಾರೆ. ಆರ್ಟಿ-ಪಿಸಿಆರ್ ವರದಿ ಸಕಾರಾತ್ಮಕವಾಗಿದೆ. ರೋಗಲಕ್ಷಣವಿಲ್ಲದ ಸೋಂಕಿತೆಯಾಗಿದ್ದು, ಮನೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಚೆನ್ನಾಗಿದ್ದಾಳೆಂದು ಅವರು ಹೇಳಿದ್ದಾರೆ.
ಚೀನಾದ ವುಹಾನ್ ವಿಶ್ವವಿದ್ಯಾಲಯದಲ್ಲಿ ಮೂರನೇ ವರ್ಷದ ವೈದ್ಯಕೀಯ ವಿದ್ಯಾರ್ಥಿಯಾಗಿದ್ದಳು. ಸೆಮಿಸ್ಟರ್ ಮುಗಿದ ನಂತರ ರಜೆಗಾಗಿ ಜನವರಿ 30, 2020 ರಂದು ಕೇರಳದ ಮನೆಗೆ ಬಂದಿದ್ದಳು. ಆಕೆಗೆ ಮೊದಲು ಕೊರೊನಾ ಸೋಂಕು ತಗಲಿತ್ತು. ಆಗ ತ್ರಿಶೂರ್ ವೈದ್ಯಕೀಯ ಕಾಲೇಜಿನ ಆಸ್ಪತ್ರೆಯಲ್ಲಿ ಸುಮಾರು 3 ವಾರಗಳ ಕಾಲ ಚಿಕಿತ್ಸೆ ನೀಡಲಾಗಿತ್ತು. ಎರಡು ಬಾರಿ ವರದಿ ನಕಾರಾತ್ಮಕವಾಗಿ ಬಂದ್ಮೇಲೆ ಫೆಬ್ರವರಿ 20, 2020ರಂದು ಮನೆಗೆ ಕಳುಹಿಸಲಾಗಿತ್ತು. ಕೇರಳದಲ್ಲಿ ಸೋಮವಾರ 7,798 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿವೆ. 100 ಮಂದಿ ಸಾವನ್ನಪ್ಪಿದ್ದಾರೆ.