ಭಾರತದಲ್ಲಿ ಆಲ್ಕೋಹಾಲ್ ಪ್ರೇಮಿಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗ್ತಿದೆ. ಇದ್ರ ಅಂಕಿ – ಅಂಶ ನಮಗೆ ಅಚ್ಚರಿ ಮೂಡಿಸುವಂತಿದೆ. 2020 ರಲ್ಲಿ ಭಾರತದಲ್ಲಿ ಆಲ್ಕೊಹಾಲ್ಯುಕ್ತ ಪಾನೀಯಗಳ ಬಳಕೆಯು ಸುಮಾರು 500 ಕೋಟಿ ಲೀಟರ್ ಆಗಿತ್ತು. 2024ರಲ್ಲಿ ಬಳಕೆ ಸರಿಸುಮಾರು 621 ಕೋಟಿ ಲೀಟರ್‌ಗೆ ಏರಿಕೆಯಾಗಲಿದೆ ಎಂದು ಅಂದಾಜಿಸಲಾಗಿದೆ. 2020-21ರಲ್ಲಿ ಮಾದಕ ಪಾನೀಯಗಳ ಸೇವನೆಯಲ್ಲಿ ಶೇಕಡಾ 10 ರಷ್ಟು ಹೆಚ್ಚಳ ಕಂಡುಬಂದಿದೆ.
2021 ರ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ, ಗ್ರಾಮೀಣ ಪ್ರದೇಶಗಳಲ್ಲಿ ವಾಸಿಸುವ ಶೇಕಡಾ 15 ರಷ್ಟು ಪುರುಷರು ಪ್ರತಿದಿನ ಆಲ್ಕೋಹಾಲ್ ಸೇವಿಸುತ್ತಾರೆ ಎಂದಿದೆ. ನಗರದಲ್ಲಿ ವಾಸಿಸುವ ಶೇಕಡಾ 14 ಕ್ಕಿಂತ ಹೆಚ್ಚು ಪುರುಷರು ಪ್ರತಿದಿನ ಆಲ್ಕೋಹಾಲ್ ಸೇವಿಸುತ್ತಾರೆ. ಸಮೀಕ್ಷೆಯ ಪ್ರಕಾರ, ಗ್ರಾಮೀಣ ಪ್ರದೇಶದಲ್ಲಿ ಶೇಕಡಾ 42.7ರಷ್ಟು ಪುರುಷರು ಮತ್ತು ನಗರಗಳಲ್ಲಿ ಶೇಕಡಾ 44.7ರಷ್ಟು ಪುರುಷರು ವಾರಕ್ಕೊಮ್ಮೆಯಾದರೂ ಮದ್ಯಪಾನ ಮಾಡುತ್ತಾರೆ.
ಸರ್ವೆ ಪ್ರಕಾರ, ಭಾರತದಲ್ಲಿ ಶೇಕಡಾ 19ರಷ್ಟು ಪುರುಷರು ಹಾಗೂ ಒಂದು ಪರ್ಸೆಂಟ್ ಮಹಿಳೆಯರು ಮದ್ಯಪಾನ ಮಾಡ್ತಾರೆ. 35 ರಿಂದ 49 ವರ್ಷ ವಯಸ್ಸಿನ ಪುರುಷರು ಹೆಚ್ಚು ಆಲ್ಕೋಹಾಲ್ ಸೇವಿಸಿದರೆ 50 ರಿಂದ 64 ವರ್ಷ ವಯಸ್ಸಿನ ಮಹಿಳೆಯರು ಹೆಚ್ಚು ಆಲ್ಕೊಹಾಲ್ ಸೇವಿಸುತ್ತಾರೆ.
ಸಮೀಕ್ಷೆಯ ಪ್ರಕಾರ, ಕ್ರಿಶ್ಚಿಯನ್ ಪುರುಷರು ಮತ್ತು ಮಹಿಳೆಯರು ಹೆಚ್ಚು ಮದ್ಯ ಸೇವಿಸುತ್ತಾರೆ. ಕ್ರಿಶ್ಚಿಯನ್ ಶೇಕಡಾ 28.3 ರಷ್ಟಿದ್ದರೆ ಅತಿ ಹಿಂದುಗಳ ಸಂಖ್ಯೆ ಶೇಕಡಾ 20.3ರಷ್ಟಿದೆ. ಅತಿ ಕಡಿಮೆ ಅಂದ್ರೆ ಶೇಕಡಾ 5.2ರಷ್ಟು ಮುಸ್ಲಿಮರು ಮದ್ಯಸೇವನೆ ಮಾಡ್ತಾರೆ.
ಸಮೀಕ್ಷೆಯಲ್ಲಿ ಇನ್ನೊಂದು ಆಸಕ್ತಿಕರ ವಿಷ್ಯ ಹೊರ ಬಿದ್ದಿದೆ. ಬಡವರು ಹೆಚ್ಚು ಕುಡಿಯುತ್ತಾರೆ ಮತ್ತು ಶ್ರೀಮಂತರು ಕಡಿಮೆ ಕುಡಿಯುತ್ತಾರೆ ಎಂದು ಸಮೀಕ್ಷೆಯಲ್ಲಿ ಹೇಳಲಾಗಿದೆ. ಶೇಕಡಾ 26.6ರಷ್ಟು ಬಡವರು ಹಾಗೂ ಶೇಕಡಾ 12.8ರಷ್ಟು ಶ್ರೀಮಂತರು ಮದ್ಯಸೇವನೆ ಮಾಡ್ತಾರೆ.