ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ ಬರೋಬ್ಬರಿ 90,928 ಹೊಸ ಕೋವಿಡ್ ಪ್ರಕರಣಗಳು ವರದಿಯಾಗಿವೆ ಎಂದು ಕೇಂದ್ರ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಸಚಿವಾಲಯ ಅಧಿಕೃತ ಮಾಹಿತಿ ನೀಡಿದೆ. ಈ ಮೂಲಕ ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 3,51,09,286 ಆಗಿದೆ. ಬುಧವಾರದಂದು ದೇಶದಲ್ಲಿ 58,097 ಕೋವಿಡ್ ಪ್ರಕರಣಗಳು ವರದಿಯಾಗಿದ್ದವು. ಇದೀಗ ದೈನಂದಿನ ಕೋವಿಡ್ ಪ್ರಕರಣದಲ್ಲಿ 56.5 ಪ್ರತಿಶತ ಏರಿಕೆಯಾದಂತಾಗಿದೆ.
ದೇಶದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 3 ಲಕ್ಷದ ಗಡಿ ಸಮೀಪಿಸುತ್ತಿದ್ದು ಪ್ರಸ್ತುತ 2,85,401 ಆ್ಯಕ್ಟಿವ್ ಕೇಸ್ಗಳು ಇವೆ ಎಂದು ಸಚಿವಾಲಯ ಹೇಳಿದೆ. ಒಟ್ಟು ಪ್ರಕರಣಗಳ ಪೈಕಿ 0.81 ಪ್ರತಿಶತದಷ್ಟು ಸಕ್ರಿಯ ಪ್ರಕರಣಗಳಿವೆ ಎಂದು ತಿಳಿದುಬಂದಿದೆ.
ಮಹಾರಾಷ್ಟ್ರ, ಪಶ್ಚಿಮ ಬಂಗಾಳ, ಕೇರಳ, ದೆಹಲಿ, ಕರ್ನಾಟಕ ಹಾಗೂ ತಮಿಳುನಾಡಿನಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆಯಲ್ಲಿ ಗಣನೀಯ ಪ್ರಮಾಣದಲ್ಲಿ ಏರಿಕೆ ಕಂಡುಬಂದಿದೆ. ಕೇಂದ್ರ ಆರೋಗ್ಯ ಸಚಿವಾಲಯ ನೀಡಿರುವ ಮಾಹಿತಿ ಪ್ರಕಾರ ಮಹಾರಾಷ್ಟ್ರದಲ್ಲಿ ಬರೋಬ್ಬರಿ 91,204 ಸಕ್ರಿಯ ಪ್ರಕರಣಗಳು ಇವೆ ಎನ್ನಲಾಗಿದೆ.
ಒಂದು ದಿನದಲ್ಲಿ ದೇಶದಲ್ಲಿ 325 ಮಂದಿ ಸೋಂಕಿತರು ಕೊರೊನಾದಿಂದ ಸಾವಿಗೀಡಾಗಿದ್ದಾರೆ. ಈ ಮೂಲಕ ದೇಶದಲ್ಲಿ ಕೊರೊನಾದಿಂದ ಸಾವನ್ನಪ್ಪಿದವರ ಒಟ್ಟು ಸಂಖ್ಯೆ 4,85,876 ಆಗಿದೆ. ಕೊರೊನಾದಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದವರ ಸಂಖ್ಯೆ ರಿಲೀಫ್ ನೀಡುವಂತಿದೆ. ಕಳೆದ 24 ಗಂಟೆಗಳಲ್ಲಿ 19 ಸಾವಿರ ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ. ಈ ಮೂಲಕ ಕೊರೊನಾದಿಂದ ಗುಣಮುಖರಾದವರ ಸಂಖ್ಯೆ 3,43,41,009 ಆಗಿದೆ. ದೇಶದಲ್ಲಿ ರಿಕವರಿ ರೇಟ್ 97.81 ಪ್ರತಿಶತವಾಗಿದೆ.
ಇನ್ನು ದೇಶದಲ್ಲಿ ಓಮಿಕ್ರಾನ್ ಪ್ರಕರಣದಲ್ಲಿಯೂ ಏರಿಕೆ ಕಂಡುಬಂದಿದ್ದು ಒಟ್ಟು ಓಮಿಕ್ರಾನ್ ಸೋಂಕಿತರ ಸಂಖ್ಯೆ 2630 ಆಗಿದೆ. ಮಹಾರಾಷ್ಟ್ರ ಹಾಗೂ ದೆಹಲಿ ಮತ್ತೊಮ್ಮೆ ಮೊದಲ ಎರಡು ಸ್ಥಾನಗಳನ್ನು ಪಡೆದಿದ್ದು ಕ್ರಮವಾಗಿ 797 ಹಾಗೂ 465 ಪ್ರಕರಣಗಳನ್ನು ಹೊಂದಿವೆ. ನಂತರದ ಸ್ಥಾನಗಳನ್ನು ರಾಜಸ್ಥಾನ, ಕೇರಳ, ಕರ್ನಾಟಕ ಹಾಗೂ ಗುಜರಾತ್ ಕ್ರಮವಾಗಿ ಪಡೆದುಕೊಂಡಿವೆ.