ಲಂಡನ್: ಭಾರತ ಕ್ರಿಕೆಟ್ ತಂಡದ ಕೋಚ್ ರವಿಶಾಸ್ತ್ರಿ ಅವರಿಗೆ ಕೊರೋನಾ ಪಾಸಿಟಿವ್ ವರದಿ ಬಂದಿದೆ. ರವಿಶಾಸ್ತ್ರಿ ಅವರ ಜೊತೆ ಬೌಲಿಂಗ್ ತರಬೇತುದಾರ ಭರತ್ ಅರುಣ್, ಫೀಲ್ಡಿಂಗ್ ಕೋಚ್ ಆರ್.ಶ್ರೀಧರ್ ಹಾಗೂ ಫಿಸಿಯೋಥೆರಪಿಸ್ಟ್ ನಿತಿನ್ ಪಟೇಲ್ ಅವರನ್ನು ಮುನ್ನೆಚ್ಚರಿಕೆ ಕ್ರಮವಾಗಿ ಪ್ರತ್ಯೇಕಿಸಲಾಗಿದೆ.
ಭಾನುವಾರ ಬೆಳಗ್ಗೆ ಇವರೆಲ್ಲರೂ ಆರ್ಟಿಪಿಸಿಆರ್ ಪರೀಕ್ಷೆಗೆ ಒಳಗಾಗಿದ್ದರು ಮತ್ತು ತಂಡದೊಂದಿಗೆ ಓವಲ್ ಕ್ರೀಡಾಂಗಣಕ್ಕೆ ಪ್ರಯಾಣಿಸಲಿಲ್ಲ. ಇನ್ನು ಟೀಂ ಇಂಡಿಯಾದ ಉಳಿದ ಸದಸ್ಯರನ್ನೂ ಕೋವಿಡ್ ಪರೀಕ್ಷೆಗೆ ಒಳಪಡಿಸಲಾಯಿತು. ವರದಿ ನೆಗೆಟಿವ್ ಬಂದ ಬಳಿಕ ಓವಲ್ ನಲ್ಲಿ ನಡೆಯುತ್ತಿರುವ 4ನೇ ಟೆಸ್ಟ್ ನ 4ನೇ ದಿನದ ಪಂದ್ಯಕ್ಕೆ ಮುಂದುವರೆಸಲು ಅನುಮತಿ ನೀಡಲಾಯಿತು.
ಪೋಸ್ಟರ್ ನಿಂದ ನೆಹರೂ ಭಾವಚಿತ್ರ ತೆಗೆದಿರುವುದಕ್ಕೆ ಕೇಂದ್ರದ ವಿರುದ್ಧ ಶಿವಸೇನಾ ಸಂಸದ ಕೆಂಡಾಮಂಡಲ
ಆಟಗಾರ ರಿಷಬ್ ಪಂತ್ ಗೆ ಕೋವಿಡ್ ಪಾಸಿಟಿವ್ ಬಂದಾಗಿನಿಂದ ಟೀಂ ಇಂಡಿಯಾ ಆಟಗಾರರಿಗೆ ಪ್ರತಿದಿನವೂ ಕೋವಿಡ್ ಪರೀಕ್ಷೆ ನಡೆಸಲಾಗುತ್ತದೆ. ತಂಡವಿದ್ದ ಹೋಟೆಲ್ ನಲ್ಲಿ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಭಾಗವಹಿಸಿದ ನಂತರ ರವಿಶಾಸ್ತ್ರಿ ಯವರಿಗೆ ರೋಗಲಕ್ಷಣ ಕಾಣಿಸಿಕೊಂಡಿರಬಹುದು ಎಂದು ಹೇಳಲಾಗಿದೆ.
“ಯುಕೆಯಲ್ಲಿ ಯಾವುದೇ ನಿರ್ಬಂಧಗಳಿಲ್ಲದ ಕಾರಣ, ಶಾಸ್ತ್ರೀಯವರ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಹೊರಗಿನ ಅತಿಥಿಗಳಿಗೂ ಅನುಮತಿ ನೀಡಲಾಗಿತ್ತು. ಇವರೆಲ್ಲ ಶಾಸ್ತ್ರೀ ಅವರ ಸಂಪರ್ಕದಲ್ಲಿದ್ದರು. ಆದ್ದರಿಂದ, ಇದು ಈಗ ಕಡ್ಡಾಯ ಪ್ರತ್ಯೇಕತೆಗೆ ಕಾರಣವಾಗಿದೆ” ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.