ನವದೆಹಲಿ: ಲಡಾಖ್ ನ ಗೋಗ್ರಾದ ಪ್ರದೇಶದಲ್ಲಿ ಭಾರತ, ಚೀನಾದಿಂದ ಸೇನೆ ಹಿಂತೆಗೆಯಲಾಗಿದೆ. ಎರಡೂ ದೇಶಗಳ ಶಾಶ್ವತ ನೆಲೆಯಲ್ಲಿ ಮಾತ್ರ ಸೇನಾ ಕಾವಲು ಇರಲಿದೆ.
ಜುಲೈ 31 ರಂದು ಚುಶುಲ್ ಮೊಲ್ಡೋದಲ್ಲಿ ನಡೆದ ಕಾರ್ಪ್ಸ್ ಕಮಾಂಡರ್ ಗಳ ನಡುವಿನ 12 ನೇ ಸುತ್ತಿನ ಮಾತುಕತೆಯ ನಂತರ, ಭಾರತೀಯ ಮತ್ತು ಚೀನಾದ ಸೈನ್ಯವನ್ನು ಪೂರ್ವ ಲಡಾಖ್ ನ ವಿವಾದಿತ ಪ್ರದೇಶವಾದ ಗೋಗ್ರಾ ಹೈಟ್ಸ್ ನಿಂದ ತೆರವುಗೊಳಿಸಲಾಗಿದೆ.
ಮತ್ತೊಂದು ಸೂಕ್ಷ್ಮ ಸ್ಥಳದ ವಿವಾದಕ್ಕೆ ಮಾತುಕತೆ ಮೂಲಕ ಬಗೆಹರಿಸಿಕೊಳ್ಳಲು ತೀರ್ಮಾನಿಸಲಾಗಿದೆ. ಬಾಕಿ ಇರುವ ವಿವಾದ ಬಗೆಹರಿಸಿಕೊಳ್ಳಲು ತೀರ್ಮಾನ ಕೈಗೊಳ್ಳಲಾಗಿದೆ ಎಂದು ಭಾರತೀಯ ಸೇನೆಯಿಂದ ಹೇಳಿಕೆ ಬಿಡುಗಡೆ ಮಾಡಲಾಗಿದೆ.
ಪೂರ್ವ ಲಡಾಖ್‌ನ ಎಲ್‌ಎಸಿಯಲ್ಲಿ, ಗಲ್ವಾನ್ ನ ನಂತರ ಇದು ಮೂರನೇ ಪ್ರಮುಖ ಬೆಳವಣಿಗೆಯಾಗಿದೆ. ಭಾರತ-ಚೀನಾ ಗಡಿ ಪ್ರದೇಶಗಳಲ್ಲಿ ವಾಸ್ತವ ನಿಯಂತ್ರಣ ರೇಖೆಯಲ್ಲಿ ಗೋಗ್ರಾ ಪ್ರದೇಶದಲ್ಲಿ ಕಳೆದ ವರ್ಷದ ಮೇ ತಿಂಗಳಿನಿಂದ ಸೇನಾ ಮುಖಾಮುಖಿ ಪರಿಸ್ಥಿತಿಯಲ್ಲಿತ್ತು.
ಒಪ್ಪಂದದ ಪ್ರಕಾರ, ಎರಡೂ ಕಡೆಯವರು ಈ ಪ್ರದೇಶದಲ್ಲಿ ಹಂತ ಹಂತವಾಗಿ, ಸಮನ್ವಯದಿಂದ ಸೇನೆ ಹಿಂತೆಗಯಲಾಗ್ತಿದೆ. ಈ ಪ್ರದೇಶದಲ್ಲಿ ರಚಿಸಲಾದ ಎಲ್ಲಾ ತಾತ್ಕಾಲಿಕ ನಿರ್ಮಾಣ, ಇತರ ಮೂಲಸೌಕರ್ಯಗಳನ್ನು ಕಿತ್ತುಹಾಕಲಾಗಿದೆ ಮತ್ತು ಪರಸ್ಪರ ಪರಿಶೀಲಿಸಲಾಗಿದೆ. ಈ ಪ್ರದೇಶದಲ್ಲಿನ ಭೂಸ್ವರೂಪವನ್ನು ಎರಡೂ ಕಡೆಯಿಂದ ಪುನಃ ಸ್ಥಾಪಿಸಲಾಗಿದೆ ಎಂದು ಹೇಳಲಾಗಿದೆ.
ಈ ಒಪ್ಪಂದದ ಅನ್ವಯ ಪ್ರದೇಶದಲ್ಲಿ ಎಲ್‌ಎಸಿಯನ್ನು ಕಟ್ಟುನಿಟ್ಟಾಗಿ ಗಮನಿಸಲಾಗುವುದು. ಎರಡೂ ಕಡೆಯಿಂದ ಗೌರವಿಸಲ್ಪಡುವ ಜೊತೆಗೆ ಯಥಾಸ್ಥಿತಿಯಲ್ಲಿಡಲಾಗುವುದು. ಏಕಪಕ್ಷೀಯ ಬದಲಾವಣೆ ಇರುವುದಿಲ್ಲ. ಇದರೊಂದಿಗೆ ಮುಖಾಮುಖಿಯ ಇನ್ನೊಂದು ಸೂಕ್ಷ್ಮ ಪ್ರದೇಶದ ಸಮಸ್ಯೆ ಪರಿಹರಿಸಲಾಗಿದೆ.
ಕಳೆದ ವರ್ಷ ಮೇ ನಲ್ಲಿ ಪಾಂಗಾಂಗ್ ಸರೋವರದ ಪ್ರದೇಶದಲ್ಲಿ ನಡೆದ ಹಿಂಸಾತ್ಮಕ ಘರ್ಷಣೆಯ ನಂತರ ಭಾರತ ಮತ್ತು ಚೀನಾ ಸೇನಾಪಡೆಗಳ ನಡುವಿನ ಗಡಿ ಬಿಕ್ಕಟ್ಟು ಭುಗಿಲೆದ್ದಿತ್ತು. ಎರಡೂ ಕಡೆಯವರು ಕ್ರಮೇಣವಾಗಿ ತಮ್ಮ ನಿಯೋಜನೆಯನ್ನು ಹೆಚ್ಚಿಸಿ ಭಾರೀ ಶಸ್ತ್ರಾಸ್ತ್ರಗಳನ್ನು ಸಂಗ್ರಹಿಸಿ ಸನ್ನದ್ಧವಾಗಿಟ್ಟಿದ್ದರು, ಮಿಲಿಟರಿ ಮತ್ತು ರಾಜತಾಂತ್ರಿಕ ಮಾತುಕತೆಯ ಸರಣಿಯ ಪರಿಣಾಮವಾಗಿ, ಉಭಯ ಪಕ್ಷಗಳು ಫೆಬ್ರವರಿಯಲ್ಲಿ ಪಾಂಗೊಂಗ್ ಸರೋವರದ ಉತ್ತರ ಮತ್ತು ದಕ್ಷಿಣ ತೀರದಿಂದ ಸೇನೆ ಮತ್ತು ಶಸ್ತ್ರಾಸ್ತ್ರಗಳನ್ನು ಹಿಂತೆಗೆದುಕೊಳ್ಳುವಿಕೆಯನ್ನು ಪೂರ್ಣಗೊಳಿಸಿದ ಒಪ್ಪಂದಕ್ಕೆ ಅನುಗುಣವಾಗಿ ಕ್ರಮ ಕೈಗೊಳ್ಳಲಾಗಿದೆ.