ರಷ್ಯಾದ ‘ಸ್ಪುಟ್ನಿಕ್ ವಿ’ ಕೊರೋನಾ ತಡೆ ಲಸಿಕೆಯನ್ನು ಭಾರತ ಮತ್ತು ಚೀನಾ ಉತ್ಪಾದಿಸಬಹುದು ಎಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಹೇಳಿದ್ದಾರೆ.
5 ರಾಷ್ಟ್ರಗಳ ಬ್ರಿಕ್ಸ್ ಬಣದ ಸದಸ್ಯರಾಗಿರುವ ಚೀನಾ ಮತ್ತು ಭಾರತದಲ್ಲಿ ಕೋವಿಡ್ -19 ವಿರುದ್ಧದ ರಷ್ಯಾದ ಸ್ಪುಟ್ನಿಕ್ ವಿ ಲಸಿಕೆಯನ್ನು ಉತ್ಪಾದಿಸಬಹುದು ಎಂದು ಮಂಗಳವಾರ ವಿಡಿಯೋ ಕಾನ್ಫರೆನ್ಸ್ ಮೂಲಕ ನಡೆದ ಬ್ರಿಕ್ಸ್ ಶೃಂಗಸಭೆಯಲ್ಲಿ ಪುಟಿನ್ ತಿಳಿಸಿದ್ದು, ಕೊರೋನಾ ವೈರಸ್ ಲಸಿಕೆಗಳ ಅಭಿವೃದ್ಧಿಗೆ ಬ್ರಿಕ್ಸ್ ದೇಶಗಳ ಜಂಟಿ ಪ್ರಯತ್ನಕ್ಕೆ ಕರೆ ನೀಡಿದ್ದಾರೆ. ಅಲ್ಲದೇ, ಲಸಿಕೆಗಳ ಅಭಿವೃದ್ಧಿ ಮತ್ತು ಸಂಶೋಧನೆಗಾಗಿ ಬ್ರಿಕ್ಸ್ ವೇಗ ನೀಡಬೇಕಿದೆ ಎಂದು ತಿಳಿಸಿದ್ದಾರೆ.
ರಷ್ಯಾ ಅಧ್ಯಕ್ಷ ಪುಟಿನ್ ಆಯೋಜಿಸಿದ್ದ ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ, ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್, ಬ್ರೆಜಿಲ್ ಅಧ್ಯಕ್ಷ ಜೈರ್ ಬೋಲ್ಸನಾರೊ ಮತ್ತು ದಕ್ಷಿಣ ಆಫ್ರಿಕಾದ ಅಧ್ಯಕ್ಷ ಸಿರಿಲ್ ರಾಮಾಫೋಸಾ ಭಾಗವಹಿಸಿದ್ದರು.
ಬ್ರಿಕ್ಸ್(ಬ್ರೆಜಿಲ್-ರಷ್ಯಾ-ಭಾರತ-ಚೀನಾ-ದಕ್ಷಿಣ ಆಫ್ರಿಕಾ) ಅನ್ನು 3.6 ಶತಕೋಟಿಗೂ ಹೆಚ್ಚು ಜನರನ್ನು ಪ್ರತಿನಿಧಿಸುವ ಪ್ರಭಾವಿ ಬಣ ಎಂದು ಕರೆಯಲಾಗುತ್ತದೆ. ವಿಶ್ವದ ಜನಸಂಖ್ಯೆಯ ಅರ್ಧದಷ್ಟು ಬ್ರಿಕ್ಸ್ ದೇಶಗಳಲ್ಲಿದೆ. ಒಟ್ಟು ಜಿಡಿಪಿ 16.6 ಟ್ರಿಲಿಯನ್ ಡಾಲರ್ ಹೊಂದಿವೆ. 12 ನೇ ಬ್ರಿಕ್ಸ್ ಶೃಂಗಸಭೆಯನ್ನು ಜುಲೈನಲ್ಲಿ ಸೇಂಟ್ ಪೀಟರ್ಸ್ ಬರ್ಗ್ ನಲ್ಲಿ ನಡೆಸಲು ನಿರ್ಧರಿಸಲಾಗಿತ್ತು ಆದರೆ, ಜಾಗತಿಕ ಕೋವಿಡ್ ಸಾಂಕ್ರಾಮಿಕ ರೋಗದ ಕಾರಣ ಮುಂದೂಡಲಾಗಿದ್ದು, ಇಂದು ವರ್ಚುಯಲ್ ಸಭೆ ನಡೆದಿದೆ.
ಆಗಸ್ಟ್ ನಲ್ಲಿ ನೋಂದಾಯಿಸಲ್ಪಟ್ಟ ರಷ್ಯಾದ ಸ್ಪುಟ್ನಿಕ್ ವಿ ಲಸಿಕೆಯನ್ನು ಚೀನಾ ಮತ್ತು ಭಾರತದಲ್ಲಿ ಉತ್ಪಾದಿಸಬಹುದು. ರಷ್ಯಾದ ನೇರ ಹೂಡಿಕೆ ನಿಧಿ ತನ್ನ ಬ್ರೆಜಿಲ್ ಮತ್ತು ಭಾರತೀಯ ಪಾಲುದಾರರೊಂದಿಗೆ ಸ್ಪುಟ್ನಿಕ್ ವಿ ಲಸಿಕೆಯ ಕ್ಲಿನಿಕಲ್ ಪ್ರಯೋಗಗಳನ್ನು ನಡೆಸುವ ಬಗ್ಗೆ ಒಪ್ಪಂದಗಳನ್ನು ಮಾಡಿಕೊಂಡಿದೆ, ಚೀನಾ ಮತ್ತು ಭಾರತದ ಔಷಧೀಯ ಕಂಪನಿಗಳೊಂದಿಗೆ ಈ ದೇಶಗಳಲ್ಲಿ ಲಸಿಕೆ ಉತ್ಪಾದನೆ ಪ್ರಾರಂಭಿಸಲು ಒಪ್ಪಂದ ಮಾಡಿಕೊಂಡಿದೆ. ಅವರ ಅಗತ್ಯಗಳನ್ನು ಸರಿದೂಗಿಸಿದ ನಂತರ ಮೂರನೇ ದೇಶಗಳಿಗೂ ನೀಡಬಹುದಾಗಿದೆ ಎಂದು ಪುಟಿನ್ ಹೇಳಿದ್ದಾರೆ.
ಆಗಸ್ಟ್ 11 ರಂದು, ಸ್ಪುಟ್ನಿಕ್ ವಿ ಕೊರೊನಾ ವೈರಸ್ ಲಸಿಕೆಯನ್ನು ನೋಂದಾಯಿಸಿದ ವಿಶ್ವದ ಮೊದಲ ದೇಶ ಎಂಬ ಹೆಗ್ಗಳಿಕೆಗೆ ರಷ್ಯಾ ಪಾತ್ರವಾಯಿತು. ಲಸಿಕೆಯನ್ನು ಗಮಾಲೇಯ ಸಂಶೋಧನಾ ಸಂಸ್ಥೆ ಅಭಿವೃದ್ಧಿಪಡಿಸಿದರೆ, ರಷ್ಯಾದ ನೇರ ಹೂಡಿಕೆ ನಿಧಿ (ಆರ್‌ಡಿಐಎಫ್) ವಿದೇಶದಲ್ಲಿ ಲಸಿಕೆ ಉತ್ಪಾದನೆ ಮತ್ತು ಪ್ರಚಾರಕ್ಕಾಗಿ ಹೂಡಿಕೆ ಮಾಡುತ್ತಿದೆ. ವೆಕ್ಟರ್ ರಿಸರ್ಚ್ ಸೆಂಟರ್ ತಯಾರಿಸಿದ ರಷ್ಯಾದ ಮತ್ತೊಂದು ಲಸಿಕೆ ಎಪಿಕೊರೊನಾವಾಕ್ ಅನ್ನು ಅಕ್ಟೋಬರ್‌ನಲ್ಲಿ ನೋಂದಾಯಿಸಲಾಗಿದೆ.
ಕೊವಿಡ್ -19 ಅನ್ನು ತಡೆಗಟ್ಟುವಲ್ಲಿ ಸ್ಪುಟ್ನಿಕ್ ವಿ ಲಸಿಕೆ ಶೇಕಡ 92 ರಷ್ಟು ಪರಿಣಾಮಕಾರಿಯಾಗಿದೆ ಎಂದು ರಷ್ಯಾ ಆರೋಗ್ಯ ಸಚಿವಾಲಯ ಕಳೆದ ವಾರ ಪ್ರಕಟಿಸಿದೆ.