ನವದೆಹಲಿ: ದೇಶದಲ್ಲಿ ಇದೇ ಮೊದಲ ಬಾರಿಗೆ 141 ಸಂಸತ್ ಸದಸ್ಯರನ್ನು ಅಮಾನತುಗೊಳಿಸಲಾಗಿದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
‘ಇಂಡಿಯಾ’ ಮೈತ್ರಿಕೂಟದ ಸಭೆ ಮುಕ್ತಾಯದ ನಂತರ ಮಾತನಾಡಿ, ಸಂಸದರ ಅಮಾನತು ವಿರೋಧಿಸಿ ನಾವು ಹೋರಾಡುತ್ತೇವೆ, ಸಂಸದರ ಅಮಾನತು ತಪ್ಪು. ಇದರ ವಿರುದ್ಧ ಹೋರಾಡಲು ನಾವು ಒಗ್ಗಟ್ಟಾಗಿದ್ದೇವೆ. ಸಂಸದರ ಅಮಾನತು ವಿರೋಧಿಸಿ ಡಿಸೆಂಬರ್ 22ರಂದು ಪ್ರತಿಭಟನೆ ನಡೆಸಲು ನಿರ್ಧರಿಸಿದ್ದೇವೆ ಎಂದು ಹೇಳಿದ್ದಾರೆ.
ಇಂದು ನಡೆದ ನಾಲ್ಕನೇ ಸಭೆಯಲ್ಲಿ ಭಾರತ ಮೈತ್ರಿಕೂಟದ 28 ರಾಜಕೀಯ ಪಕ್ಷಗಳ ನಾಯಕರು ಇಲ್ಲಿ ಹಾಜರಿದ್ದರು. ಸಭೆಯಲ್ಲಿ ಸಂಸದರನ್ನು ಅಮಾನತುಗೊಳಿಸುವುದು ಪ್ರಜಾಪ್ರಭುತ್ವ ವಿರೋಧಿ ಎಂದು ನಿರ್ಣಯವನ್ನು ಅಂಗೀಕರಿಸಿದ್ದೇವೆ. ಪ್ರಜಾಪ್ರಭುತ್ವವನ್ನು ಉಳಿಸಲು ನಾವೆಲ್ಲರೂ ಹೋರಾಡಬೇಕಾಗಿದೆ. ನಾವೆಲ್ಲರೂ ಹೋರಾಟಕ್ಕೆ ಸಿದ್ಧರಿದ್ದೇವೆ ಎಂದು ತಿಳಿಸಿದ್ದಾರೆ.
ನಾವು ಭದ್ರತೆಯ ವಿಷಯವನ್ನು ಪ್ರಸ್ತಾಪಿಸಿದ್ದೇವೆ. ಸಂಸತ್ತಿನ ಭದ್ರತಾ ಲೋಪದ ಬಗ್ಗೆ ಕೇಂದ್ರದ ಗೃಹ ಸಚಿವ ಅಮಿತ್ ಶಾ ಅಥವಾ ಪ್ರಧಾನಿ ಮೋದಿ ಅವರು ಸಂಸತ್ ಗೆ ಬಂದು ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಮಾತನಾಡಬೇಕು ಎಂದು ನಾವು ಬಹಳ ದಿನಗಳಿಂದ ಹೇಳುತ್ತಿದ್ದೇವೆ. ಆದರೆ, ಅವರು ಉತ್ತರಿಸದೇ ನಿರಾಕರಿಸುತ್ತಿದ್ದಾರೆ ಎಂದು ಟೀಕಿಸಿದ್ದಾರೆ.