ಉತ್ತರಪ್ರದೇಶದಲ್ಲಿ ಶನಿವಾರ ನಡೆದ ಸ್ಥಳೀಯ ನಾಗರಿಕ ಸಂಸ್ಥೆಗಳ ಚುನಾವಣೆಯಲ್ಲಿ ಹಿಂದುತ್ವ ಕೇಂದ್ರದ ಅಯೋಧ್ಯೆ ವಾರ್ಡ್ ನಲ್ಲಿ ಸ್ವತಂತ್ರ ಮುಸ್ಲಿಂ ಅಭ್ಯರ್ಥಿಯೊಬ್ಬರು ಅಚ್ಚರಿಯ ಗೆಲುವು ಸಾಧಿಸಿದ್ದಾರೆ.
ಅಯೋಧ್ಯೆಯಲ್ಲಿ ನಡೆದ ಮೇಯರ್ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಿದೆ. 60 ವಾರ್ಡ್‌ಗಳ ಪೈಕಿ 27 ವಾರ್ಡ್‌ಗಳನ್ನು ಬಿಜೆಪಿ ಗೆದ್ದುಕೊಂಡಿದೆ. ಎಸ್ಪಿ ಮತ್ತು ಪಕ್ಷೇತರರು ಕ್ರಮವಾಗಿ 17 ಮತ್ತು 10 ವಾರ್ಡ್‌ಗಳನ್ನು ಗೆದ್ದಿದ್ದಾರೆ.
ಸ್ಥಳೀಯ ಯುವಕ ಸುಲ್ತಾನ್ ಅನ್ಸಾರಿ ಅವರು ಚುನಾವಣೆಗೆ ಪದಾರ್ಪಣೆ ಮಾಡಿದ್ದು, ರಾಮ ಜನ್ಮಭೂಮಿ ದೇವಸ್ಥಾನದ ಆಂದೋಲನದ ರಾಮ್ ಅಭಿರಾಮ್ ದಾಸ್ ವಾರ್ಡ್ ಅನ್ನು ಗೆದ್ದಿದ್ದಾರೆ.
ಅಯೋಧ್ಯೆಯಲ್ಲಿ ಹಿಂದೂ-ಮುಸ್ಲಿಂ ಸಹೋದರತ್ವ ಮತ್ತು ಎರಡೂ ಸಮುದಾಯಗಳ ಶಾಂತಿಯುತ ಸಹಬಾಳ್ವೆಗೆ ಇದು ಅತ್ಯುತ್ತಮ ಉದಾಹರಣೆಯಾಗಿದೆ. ನಮ್ಮ ಹಿಂದೂ ಸಹೋದರರಿಂದ ಯಾವುದೇ ಪಕ್ಷಪಾತವಿಲ್ಲ ಮತ್ತು ಅವರು ನನ್ನನ್ನು ಅನ್ಯ ಧರ್ಮದವರಂತೆ ನಡೆಸಿಕೊಂಡಿಲ್ಲ. ಅವರು ನನ್ನನ್ನು ಬೆಂಬಲಿಸಿದರು ಮತ್ತು ನನ್ನ ಗೆಲುವನ್ನು ಖಚಿತಪಡಿಸಿದರು ಎಂದು ಅನ್ಸಾರಿ ಹೇಳಿದ್ದಾರೆ.
ರಾಮಜನ್ಮಭೂಮಿಯ ಹಿಂಭಾಗದಲ್ಲಿರುವ ಈ ವಾರ್ಡ್‌ನಲ್ಲಿ 3,844 ಹಿಂದೂ ಮತಗಳಿದ್ದರೆ, ಮುಸ್ಲಿಂ ಮತಗಳ ಪಾಲು 440 ಮತಗಳೊಂದಿಗೆ ಒಟ್ಟು ಹಿಂದೂ ಮತಗಳ ಶೇಕಡಾ 11 ರಷ್ಟು ಮಾತ್ರ.
ಒಟ್ಟು ಚಲಾವಣೆಯಾದ 2,388 ಮತಗಳಲ್ಲಿ ವಿಜೇತ ಅಭ್ಯರ್ಥಿ ಶೇ.42 ರಷ್ಟು ಪಾಲು ಪಡೆದಿದ್ದಾರೆ. ಕಣದಲ್ಲಿದ್ದ 10 ಅಭ್ಯರ್ಥಿಗಳ ಪೈಕಿ ಅನ್ಸಾರಿ 996 ಮತಗಳನ್ನು ಪಡೆದರು.
ಹಿಂದೂ ಪ್ರಾಬಲ್ಯವಿರುವ ಪ್ರದೇಶದಿಂದ ಸ್ಪರ್ಧಿಸಲು ಯಾವುದೇ ಹಿಂಜರಿಕೆ ಇದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ನಾನು ಈ ಪ್ರದೇಶದ ನಿವಾಸಿ ಮತ್ತು ನನ್ನ ಜ್ಞಾನದ ಪ್ರಕಾರ ನನ್ನ ಪೂರ್ವಜರು 200 ವರ್ಷಗಳಿಂದ ಇಲ್ಲಿ ವಾಸಿಸುತ್ತಿದ್ದಾರೆ. ನಾನು ಚುನಾವಣೆಯಲ್ಲಿ ಸ್ಪರ್ಧಿಸುವುದು ನನ್ನ ಹಿಂದೂ ಮಿತ್ರರ ಇಚ್ಛೆ. ಅವರು ನನ್ನನ್ನು ಪೂರ್ಣ ಹೃದಯದಿಂದ ಬೆಂಬಲಿಸಿದರು ಮತ್ತು ಮುಂದುವರಿಯಲು ಪ್ರೋತ್ಸಾಹಿಸಿದರು ಎಂದು ಅನ್ಸಾರಿ ಹೇಳಿದ್ದಾರೆ.