ಸ್ವತಂತ್ರ ಭಾರತದ ಮೊದಲ ಮತದಾರ ಎಂಬ ಹೆಗ್ಗಳಿಕೆ ಹೊಂದಿದ್ದ ಹಿಮಾಚಲ ಪ್ರದೇಶದ ನಿವಾಸಿ 106 ವರ್ಷದ ಶ್ಯಾಮ್ ಸರಣ್ ನೇಗಿ ಇಂದು ಬೆಳಿಗ್ಗೆ ವಿಧಿವಶರಾಗಿದ್ದಾರೆ. ಮಹತ್ವದ ಸಂಗತಿ ಎಂದರೆ ಮುಂಬರುವ ಹಿಮಾಚಲ ಪ್ರದೇಶ ವಿಧಾನಸಭಾ ಚುನಾವಣೆಗೆ ಮುಂಚಿತವಾಗಿಯೇ ಪೋಸ್ಟಲ್ ಬ್ಯಾಲೆಟ್ ಮೂಲಕ ಮತದಾನ ಮಾಡಿ ಅವರು ಇಹಲೋಕ ತ್ಯಜಿಸಿದ್ದಾರೆ.
ವಯೋ ಸಹಜ ಕಾಯಿಲೆಗಳಿಂದ ಬಳಲುತ್ತಿದ್ದ ಅವರು ನವೆಂಬರ್ 2 ರಂದು ಪೋಸ್ಟಲ್ ಬ್ಯಾಲೆಟ್ ಮೂಲಕ ಮತದಾನ ಮಾಡಿದ್ದರು. ಇಂದು ಬೆಳಗ್ಗೆ ವಿಧಿವಶರಾಗಿದ್ದಾರೆ ಎಂದು ತಿಳಿದುಬಂದಿದೆ. ಸಕಲ ಸರ್ಕಾರಿ ಗೌರವಗಳೊಂದಿಗೆ ಅವರ ಅಂತ್ಯಕ್ರಿಯೆಯನ್ನು ನೆರವೇರಿಸಲಾಗುತ್ತದೆ ಎಂದು ಹಿಮಾಚಲ ಪ್ರದೇಶದ ಕಿನ್ನೂರು ಜಿಲ್ಲಾಧಿಕಾರಿ ಅಬೀದ್ ಹುಸೇನ್ ತಿಳಿಸಿದ್ದಾರೆ.
ಜುಲೈ 1, 1917ರಲ್ಲಿ ಜನಿಸಿದ್ದ ನೇಗಿ ಶಾಲಾ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದರು. 1947ರಲ್ಲಿ ಭಾರತ ಸ್ವಾತಂತ್ರ್ಯ ಪಡೆದ ಬಳಿಕ 1952ರಲ್ಲಿ ಮೊದಲ ಸಾರ್ವತ್ರಿಕ ಚುನಾವಣೆ ನಡೆದಿತ್ತು. ಆದರೆ ಹಿಮಾಚಲ ಪ್ರದೇಶದಲ್ಲಿ ಹವಾಮಾನದ ಕಾರಣಕ್ಕೆ ಐದು ತಿಂಗಳ ಮುಂಚಿತವಾಗಿಯೇ ಮತದಾನ ನಡೆದಿದ್ದು, ಈ ವೇಳೆ ಮೊತ್ತ ಮೊದಲಿಗರಾಗಿ ಶ್ಯಾಮ್ ಸರಣ್ ನೇಗಿ ತಮ್ಮ ಮತ ಚಲಾಯಿಸಿದ್ದರು.