ಚುನಾವಣೆಗಳಲ್ಲಿ ಸ್ಪರ್ಧಿಸುವ ಕೆಲ ಅಭ್ಯರ್ಥಿಗಳು ವಿಭಿನ್ನವಾಗಿ ನಾಮಪತ್ರ ಸಲ್ಲಿಸುವ ಹಲವು ಘಟನೆಗಳು ಈಗಾಗಲೇ ನಡೆದಿವೆ. ಕುದುರೆ ಮೇಲೆ ಬರುವುದು, ಎತ್ತಿನ ಬಂಡಿ ಏರಿ ನಾಮಪತ್ರ ಸಲ್ಲಿಕೆ ಮಾಡುವುದು ಸೇರಿದಂತೆ ಹತ್ತಾರು ಘಟನೆಗಳು ನಡೆದಿದ್ದು, ಇದರ ಮಧ್ಯೆ ಲೋಕಸಭಾ ಚುನಾವಣೆಯ ಪಕ್ಷೇತರ ಅಭ್ಯರ್ಥಿಯೊಬ್ಬರು ವಿಶಿಷ್ಟ ಕಾರಣಕ್ಕೆ ಎಲ್ಲರ ಗಮನ ಸೆಳೆದಿದ್ದಾರೆ.
ಹೌದು, ಉತ್ತರ ಪ್ರದೇಶದ ಗೋರಕ್ಪುರ ಲೋಕಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ರಾಜನ್ ಯಾದವ್, ಮಂಗಳವಾರದಂದು ಚಟ್ಟದಲ್ಲಿ ಬಂದು ತಮ್ಮ ನಾಮಪತ್ರ ಸಲ್ಲಿಸಿದ್ದಾರೆ.
‘ಆರ್ತಿ ಬಾಬಾ’ ಎಂದೇ ಹೆಸರಾಗಿರುವ ಅವರು ಈ ಹಿಂದೆಯೂ ಹಲವು ಚುನಾವಣೆಗಳಲ್ಲಿ ಸ್ಪರ್ಧಿಸಿ ಪರಾಭವಗೊಂಡಿದ್ದಾರೆ. ತಾವು ಎಂಬಿಎ ಪದವೀಧರ ಎಂದು ಹೇಳಿಕೊಂಡಿರುವ ರಾಜನ್ ಯಾದವ್, ಬೌದ್ಧ ಬಿಕ್ಕು ಆಗಿರುವ ತಾವು ಭಿಕ್ಷಾಟನೆ ಮಾಡಿ ಜೀವನ ನಡೆಸುತ್ತಿದ್ದೇನೆ ಎಂದು ತಿಳಿಸಿದ್ದಾರೆ.
ಮತ್ತೊಂದು ಮಹತ್ವದ ಸಂಗತಿ ಎಂದರೆ ಇವರು ಸ್ಮಶಾನದಲ್ಲಿ ತಮ್ಮ ಚುನಾವಣೆ ಕಚೇರಿ ತೆರೆದಿದ್ದಾರೆ. ತಾವು ಆಯ್ಕೆಯಾದಲ್ಲಿ ಜ್ವಲಂತ ಸಮಸ್ಯೆಗಳ ವಿರುದ್ಧ ಹೋರಾಡುವದಾಗಿ ತಿಳಿಸಿದ ಅವರು, ಪ್ರಜಾಪ್ರಭುತ್ವ ಉಳಿಸಲು ಹಾಗೂ ಜನಸೇವೆ ಮಾಡಲು ಅವಿವಾಹಿತನಾಗಿಯೇ ಉಳಿಯುವುದಾಗಿ ಹೇಳಿಕೊಂಡಿದ್ದಾರೆ.