ನವದೆಹಲಿ: ಜೂನ್ 9ರಂದು ಸತತ ಮೂರನೇ ಅವಧಿಗೆ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸುವ ಮೂಲಕ ಜವಾಹರಲಾಲ್ ನೆಹರು ಅವರ ದಾಖಲೆಯನ್ನು ಸರಿಗಟ್ಟಿದ ಪ್ರಧಾನಿ ಮೋದಿ ನಾಳೆ ಸ್ವಾತಂತ್ರ್ಯೋತ್ಸವದ ದಿನ ಮತ್ತೊಂದು ದಾಖಲೆ ನಿರ್ಮಿಸಲಿದ್ದಾರೆ.
78ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಗುರುವಾರ ದೆಹಲಿಯ ಕೆಂಪುಕೋಟೆಯಿಂದ ರಾಷ್ಟ್ರವನ್ನು ಉದ್ದೇಶಿಸಿ ಪ್ರಧಾನಿ ಮೋದಿ ಭಾಷಣ ಮಾಡಲಿದ್ದಾರೆ. ಮಾಜಿ ಪ್ರಧಾನಿಗಳಾದ ಜವಾಹರ ಲಾಲ್ ನೆಹರು ಮತ್ತು ಇಂದಿರಾಗಾಂಧಿಯವರ ಬಳಿಕ ಸತತ 11ನೇ ಬಾರಿ ಕೆಂಪು ಕೋಟೆಯಿಂದ ಸ್ವಾತಂತ್ರ್ಯೋತ್ಸವ ಭಾಷಣ ಮಾಡಿದ ಮೂರನೇ ಪ್ರಧಾನಿಯಾಗಿ ಮೋದಿ ದಾಖಲೆ ಬರೆಯಲಿದ್ದಾರೆ.
ಮೂರನೇ ಅವಧಿಗೆ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ ನಂತರ ಮೋದಿ ಅವರ ಮೊದಲ ಕೆಂಪುಕೋಟೆ ಮೇಲಿನ ಭಾಷಣ ಇದಾಗಿದೆ. ಯುಪಿಎ ಸರ್ಕಾರದ ಅವಧಿಯಲ್ಲಿ ಪ್ರಧಾನಿ ಮನಮೋಹನ್ ಸಿಂಗ್ ಅವರು ಸತತ 10 ಬಾರಿ ಸ್ವಾತಂತ್ರೋತ್ಸವ ಭಾಷಣ ಮಾಡಿದ್ದರು.