alex Certify Independence Day : ಸ್ವಾತಂತ್ರ್ಯೋತ್ಸವದಲ್ಲಿ ‘ಸಿಎಂ ಸಿದ್ದರಾಮಯ್ಯ’ ಭಾಷಣ, ಹೀಗಿದೆ ಹೈಲೆಟ್ಸ್..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

Independence Day : ಸ್ವಾತಂತ್ರ್ಯೋತ್ಸವದಲ್ಲಿ ‘ಸಿಎಂ ಸಿದ್ದರಾಮಯ್ಯ’ ಭಾಷಣ, ಹೀಗಿದೆ ಹೈಲೆಟ್ಸ್..!

ಸಾವಿರಾರು ಭಾಷೆಗಳು, ನೂರಾರು ಧರ್ಮಗಳು, ವೈವಿಧ್ಯಮಯ ಆಚಾರ ವಿಚಾರಗಳು, ಸಂಸ್ಕೃತಿ ಮೇಳೈಸಿರುವ ನಮ್ಮ ದೇಶ ಸಮೃದ್ಧ ನಾಗರಿಕತೆಯ ತೊಟ್ಟಿಲು. ಪರಸ್ಪರ ಸಾಮರಸ್ಯ, ಸಹಬಾಳ್ವೆ, ಸೌಹಾರ್ದತೆಯನ್ನು ನಮಗೆ ಯಾರೂ ಕಲಿಸಿಕೊಡಬೇಕಾದ ಅಗತ್ಯವಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

78ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಮಾಣಿಕ್ ಶಾ ಪರೇಡ್ ಮೈದಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ ಮಾತನಾಡಿದರು.

ಇವು ಕೇವಲ ಬಾಯಿಮಾತಿನ ಸವಕಲು ಪದಗಳಲ್ಲ. ಸಾವಿರಾರು ವರ್ಷಗಳಿಂದ ನಾವು ಇದನ್ನು ಪಾಲಿಸಿಕೊಂಡು ಬಂದಿದ್ದೇವೆ. ಈ ಸಾಮಾಜಿಕ ಮೌಲ್ಯಗಳಿಗೆ ಕುಂದುಂಟು ಮಾಡುವ ಶಕ್ತಿಗಳ ವಿರುದ್ಧ ಸದಾ ಜಾಗೃತರಾಗಿರಬೇಕಾಗಿದೆ. ಸ್ವಾತಂತ್ರ್ಯದ ಈ ಸಂಭ್ರಮದ ಸಂದರ್ಭದಲ್ಲಿ ಪರಸ್ಪರ ಸಾಮರಸ್ಯ, ಸೌಹಾರ್ದವನ್ನು ಇನ್ನಷ್ಟು ಬಲಪಡಿಸುವ, ಆ ಮೂಲಕ ದಾರ್ಶನಿಕರು ತೋರಿಸಿಕೊಟ್ಟ ಹಾದಿಯಲ್ಲಿ ಮುನ್ನಡೆಯುವ ಸಂಕಲ್ಪ ಮಾಡಬೇಕಾಗಿದೆ. ಸಾವಿರಾರು ಮಹನೀಯರ ಹೋರಾಟ, ತ್ಯಾಗ, ಪರಿಶ್ರಮಗಳ ಫಲವನ್ನು ನಾವು ಇಂದು ಉಣ್ಣುತ್ತಿದ್ದೇವೆ. ಇಂದು ನಮ್ಮ ಕೈಯಲ್ಲಿರುವ ಸ್ವಾತಂತ್ರ್ಯದ ದೀವಿಗೆಯನ್ನು ಮುಂದಿನ ತಲೆಮಾರಿಗೆ ಜತನದಿಂದ ತಲುಪಿಸುವ ಅತ್ಯಂತ ದೊಡ್ಡ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಈ ಹೊಣೆಗಾರಿಕೆಯನ್ನು ಅರಿತುಕೊಂಡು ನಾವು ಮುನ್ನಡೆಯಬೇಕಿದೆ.

ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದವರು, ಅಲ್ಪಸಂಖ್ಯಾತರು, ಮಹಿಳೆಯರು, ಶೋಷಿತರ ಅಭಿವೃದ್ಧಿ ನಮ್ಮ ಬದ್ಧತೆ. ಸ್ವಾತಂತ್ರ್ಯದ ಫಲವನ್ನು ಸಮಾಜದ ಕಟ್ಟಕಡೆಯ ಪ್ರಜೆಗೂ ತಲುಪಿಸುವುದು ನಮ್ಮ ಕನಸು. ಈ ನಿಟ್ಟಿನಲ್ಲಿ ಸರ್ಕಾರ ಯೋಜನಾಬದ್ಧವಾಗಿ ಹೆಜ್ಜೆ ಇರಿಸುತ್ತಿದೆ. ದುರ್ಬಲ ಹಾಗೂ ಶೋಷಿತ ಸಮುದಾಯಗಳ ಉಜ್ವಲ ಭವಿಷ್ಯ ನಿರ್ಮಾಣಕ್ಕಾಗಿ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ವಸತಿ ಶಾಲೆಗಳು, ಹಾಸ್ಟೆಲುಗಳ ನಿರ್ಮಾಣಕ್ಕೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ನಮ್ಮ ಗುರಿ ಸ್ಪಷ್ಟವಾಗಿದೆ. ಬುದ್ಧ, ಬಸವಾದಿ ಶರಣರು, ಡಾ.ಬಾಬಾ ಸಾಹೇಬ್ ಅಂಬೇಡ್ಕರ್, ನಾರಾಯಣ ಗುರು, ಸಾವಿತ್ರಿ ಬಾಯಿ ಪುಲೆಯಂತಹ ಮಹಾನರು, ದಾರ್ಶನಿಕರು ತೋರಿಸಿ ಕೊಟ್ಟ ಮಾನವೀಯತೆಯ ಹಾದಿಯಲ್ಲಿ ಮುನ್ನಡೆಯಲು ನಾವು ಪ್ರಯತ್ನಿಸುತ್ತಿದ್ದೇವೆ. ಪ್ರಜಾಪ್ರಭುತ್ವವನ್ನು ಉಳ್ಳವರ ಆಡುಂಬೊಲವನ್ನಾಗಿಸಲು ನಾವು ಎಂದಿಗೂ ಅವಕಾಶ ಕೊಡುವುದಿಲ್ಲ. ಸಂವಿಧಾನವೇ ನಮಗೆ ಮಾರ್ಗದರ್ಶಕ. ಇಲ್ಲಿ ಎಲ್ಲರೂ ಸಮಾನರು. ಸರ್ವಜನ ಕಲ್ಯಾಣವೇ ಪ್ರಜಾಪ್ರಭುತ್ವದ ಅಂತಿಮ ಗುರಿ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರಿಗೂ ಕಲ್ಯಾಣ ಕಾರ್ಯಕ್ರಮಗಳ ಲಾಭ ದೊರೆಯಬೇಕೆಂಬ ತುಡಿತ ನಮ್ಮ ಸರ್ಕಾರದ ಪ್ರತಿಯೊಂದು ನಡೆಯಲ್ಲೂ ಸ್ಪಷ್ಟವಾಗಿ ಗುರುತಿಸಬಹುದು. ಸಾಮಾಜಿಕ ಸಮಾನತೆ, ಆರ್ಥಿಕ ಸ್ವಾತಂತ್ರ್ಯ, ಪ್ರತಿಯೊಬ್ಬರಿಗೂ ನೆಮ್ಮದಿಯಿಂದ, ಗೌರವದಿಂದ ಬದುಕುವ ವಾತಾವರಣ ಕಲ್ಪಿಸಲು ನಾವು ಬದ್ಧರಾಗಿದ್ದೇವೆ. ಜನಕಲ್ಯಾಣದ ಬಗ್ಗೆ ನಮ್ಮ ನಿಲುವು, ದಾರಿ ಅತ್ಯಂತ ಸ್ಪಷ್ಟವಾಗಿದೆ.

ರಾಜ್ಯದ ವಾಣಿಜ್ಯ ವಹಿವಾಟು ಕ್ಷೇತ್ರ ಅತ್ಯಂತ ಬಲಿಷ್ಠವಾಗಿದೆ. 2023-24ನೇ ಸಾಲಿನಲ್ಲಿ ರಾಜ್ಯವು 1,66,545 ಮಿಲಿಯನ್ ಯುಎಸ್ ಡಾಲರ್ ಮೊತ್ತದ ರಫ್ತು ಮಾಡಿ ದೇಶದಲ್ಲೇ ಮೊದಲನೇ ಸ್ಥಾನದಲ್ಲಿದೆ. ರಾಜ್ಯದ ನೀರಾವರಿ ಯೋಜನೆಗಳನ್ನು ತ್ವರಿತಗತಿಯಲ್ಲಿ ಅನುಷ್ಠಾನಗೊಳಿಸುವ ಉದ್ದೇಶದಿಂದ ಈ ಬಾರಿ ಹೆಚ್ಚಿನ ಅನುದಾನ ಒದಗಿಸಲಾಗಿದೆ. ಎತ್ತಿನ ಹೊಳೆ ಯೋಜನೆಯಡಿ ಪ್ರಸಕ್ತ ಸಾಲಿನಲ್ಲಿ ಈವರೆಗೆ 855.02 ಕೋಟಿ ರೂಪಾಯಿ, ಕೃಷ್ಣಾ ಮೇಲ್ದಂಡೆ ಯೋಜನೆ ಹಂತ 3ರಡಿ 151.16 ಕೋಟಿ ರೂಪಾಯಿ ವೆಚ್ಚ ಭರಿಸಲಾಗಿದೆ. ಗ್ರಾಮೀಣ ರಸ್ತೆಗಳ ಅಭಿವೃದ್ಧಿಗಾಗಿ ಪಿ.ಎಂ.ಜಿ.ಎಸ್.ವೈ, ನಮ್ಮ ಗ್ರಾಮ ನಮ್ಮ ರಸ್ತೆ ಮತ್ತು ವಿಶೇಷ ಅಭಿವೃದ್ಧಿ ಯೋಜನೆಗಳಡಿ ಒಟ್ಟು 803 ಕಿಮೀ ಉದ್ದದ ರಸ್ತೆಯನ್ನು 463.11 ಕೋಟಿ ರೂಪಾಯಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗಿದೆ.
ಕಳೆದ ವರ್ಷ ಅನಾವೃಷ್ಟಿಯಿಂದಾಗಿ ನಮ್ಮ ರೈತರು ಸಂಕಷ್ಟ ಎದುರಿಸಬೇಕಾಯಿತು. ಕೇಂದ್ರ ಸರ್ಕಾರ ನೆರವು ನೀಡದಿದ್ದರೂ, ರೈತರ ನೆರವಿಗೆ ನಾವು ಕೈಜೋಡಿಸಿದ್ದೇವೆ. ಬೆಳೆ ನಷ್ಟ ಅನುಭವಿಸಿದ 38,58,737 ರೈತರಿಗೆ ಒಟ್ಟಾರೆಯಾಗಿ 3454.22 ಕೋಟಿ ರೂಪಾಯಿ ಬೆಳೆಹಾನಿ ಪರಿಹಾರ ವಿತರಿಸಲಾಗಿದೆ. ಪ್ರಸ್ತುತ ಅತಿ ಮಳೆಯಿಂದಾಗಿ ತೊಂದರೆಗೊಳಗಾದ ಜನತೆಯ ನೆರವಿಗೆ ಸರ್ಕಾರ ಧಾವಿಸಿದೆ. ಅತಿವೃಷ್ಟಿಯಿಂದ ಪೂರ್ಣವಾಗಿ ಮನೆ ಕಳೆದುಕೊಂಡವರಿಗೆ 1 ಲಕ್ಷ 20 ಸಾವಿರ ರೂಪಾಯಿ ಪರಿಹಾರ ಒದಗಿಸುವುದರೊಂದಿಗೆ ಮನೆಯನ್ನು ನಿರ್ಮಿಸಿ ಕೊಡಲು ನಾವು ನಿರ್ಧರಿಸಿದ್ದೇವೆ. ಗ್ಯಾರಂಟಿ ಯೋಜನೆಗಳು ಜನರ ಬದುಕಿಗೆ ಚೇತೋಹಾರಿಯಾಗಿದ್ದರೆ, ಆರ್ಥಿಕ ಅಭಿವೃದ್ಧಿಯೆಡೆಗಿನ ನಮ್ಮ ಕಾರ್ಯಕ್ರಮಗಳು, ಪ್ರಯತ್ನಗಳು ಸ್ಥಿರತೆ ತರುವ ಸಾಧನಗಳಾಗಿವೆ. ನಮ್ಮ ರಾಜ್ಯ ಹೂಡಿಕೆದಾರರ ನೆಚ್ಚಿನ ತಾಣವಾಗಿದ್ದು, 2023-24 ನೇ ಸಾಲಿನಲ್ಲಿ 54,427 ಕೋಟಿ ರೂಪಾಯಿ ವಿದೇಶಿ ಬಂಡವಾಳ ಹೂಡಿಕೆ ಆರ್ಕಷಿಸುವುದರೊಂದಿಗೆ ದೇಶದಲ್ಲಿ 3ನೇ ಸ್ಥಾನದಲ್ಲಿದೆ. ಪ್ರಸ್ತುತ ಸಾಲಿನಲ್ಲಿ ರಾಜ್ಯದಲ್ಲಿ ವಿವಿಧ ಸಂಸ್ಥೆಗಳೊಂದಿಗೆ 42,915 ಕೋಟಿ ರೂಪಾಯಿ ಹೂಡಿಕೆಗೆ 13 ಒಪ್ಪಂದಗಳನ್ನು ಮಾಡಿಕೊಳ್ಳಲಾಗಿದೆ. ಇದರಿಂದ ರಾಜ್ಯದಲ್ಲಿ 22,600 ಉದ್ಯೋಗ ಸೃಷ್ಟಿಯಾಗುವ ನಿರೀಕ್ಷೆ ಇದೆ.

ನಮ್ಮ ರಾಜ್ಯ ಎಲ್ಲಾ ಕ್ಷೇತ್ರಗಳಲ್ಲಿ ಅಭಿವೃದ್ಧಿಯನ್ನು ಸಾಧಿಸಿದ್ದು, ಹಲವು ಕ್ಷೇತ್ರಗಳಲ್ಲಿ ದೇಶಕ್ಕೆ ಮಾದರಿಯಾಗಿದೆ. ವಿಜ್ಞಾನ, ಮಾಹಿತಿ ತಂತ್ರಜ್ಞಾನ ಕ್ಷೇತ್ರಗಳಲ್ಲಿ ನಮ್ಮ ರಾಜ್ಯ ಮುಂಚೂಣಿಯಲ್ಲಿದೆ. ಮೂಲಸೌಕರ್ಯಗಳ ಅಭಿವೃದ್ಧಿ, ಗ್ರಾಮೀಣಾಭಿವೃದ್ಧಿ, ಕೈಗಾರಿಕಾ ಅಭಿವೃದ್ಧಿ, ಕೌಶಾಲ್ಯಾಭಿವೃದ್ಧಿ, ಆರೋಗ್ಯ, ಶಿಕ್ಷಣ, ಸಮಾಜ ಕಲ್ಯಾಣ, ಉದ್ಯೋಗ ಸೃಷ್ಟಿ, ಜನಸ್ನೇಹಿ ಆಡಳಿತ ನಮ್ಮ ಕನಸು ಮಾತ್ರವಲ್ಲ; ಇದೇ ಗುರಿಯಾಗಿದೆ. ಈ ಗುರಿ ಸಾಧನೆಯತ್ತ ಮುನ್ನಡೆಯುವುದೇ ನಮ್ಮ ಧ್ಯೇಯವಾಗಿದೆ. ಸಾರ್ವತ್ರಿಕ ಕನಿಷ್ಠ ಆದಾಯ (Universal Basic Income) ಪರಿಕಲ್ಪನೆಯಲ್ಲಿ, ಎಲ್ಲರಿಗೂ ಬದುಕಲು ಬೇಕಾದಷ್ಟು ಆದಾಯ ಸಿಗಬೇಕು ಎಂಬ ಕಾರಣದಿಂದಲೇ ನಾವು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದ್ದೇವೆ. ಬೆಲೆ ಏರಿಕೆ, ನಿರುದ್ಯೋಗದಿಂದ ತತ್ತರಿಸಿರುವ ಜನತೆಗೆ ಇವು ಆರ್ಥಿಕ ಶಕ್ತಿಯನ್ನು ನೀಡುತ್ತಿವೆ. ಅದರಲ್ಲೂ ನೇರವಾಗಿ ಹಣಕಾಸಿನ ನೆರವು ಒದಗಿಸುವ ಗೃಹಲಕ್ಷ್ಮಿ ಮತ್ತು ಯುವನಿಧಿ ಯೋಜನೆಗಳು ಸಾರ್ವತ್ರಿಕ ಕನಿಷ್ಠ ಆದಾಯ ಮಾದರಿಯ ಕಲ್ಯಾಣ ಯೋಜನೆಗಳಾಗಿವೆ. ಶಕ್ತಿ ಮತ್ತು ಗೃಹಲಕ್ಷ್ಮಿ ಯೋಜನೆಗಳು ಲಿಂಗ ಸಮಾನತೆಯತ್ತ ದೃಢ ಹೆಜ್ಜೆಯನ್ನು ಇರಿಸಿದೆ. ದುಡಿಮೆ ಮಾಡುತ್ತಿರುವ ಮಹಿಳೆಯರಿಗೂ ಅವರ ಖರ್ಚಿನ ದೊಡ್ಡ ಮೊತ್ತವನ್ನು ಉಳಿಸಿ, ಅವರ ಆರ್ಥಿಕ ಸ್ವಾತಂತ್ರ್ಯವನ್ನು ಹೆಚ್ಚಿಸಿದೆ. ಗ್ಯಾರಂಟಿ ಯೋಜನೆಗಳಿಗೆ ಕಳೆದ ವರ್ಷ ನಾವು 36 ಸಾವಿರ ಕೋಟಿ ರೂಪಾಯಿ ವೆಚ್ಚ ಮಾಡಿದ್ದೇವೆ. ಈ ವರ್ಷ ಈ ಯೋಜನೆಗಳಿಗೆ 52 ಸಾವಿರ ಕೋಟಿ ರೂಪಾಯಿ ನಿಗದಿಪಡಿಸಿದ್ದೇವೆ. ಕರ್ನಾಟಕದ ಈ ಯೋಜನೆ ದೇಶಕ್ಕೆ ಮಾದರಿ ಎಂದರೆ ಖಂಡಿತಾ ಅತಿಶಯೋಕ್ತಿಯಾಗಲಾರದು.

ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ನಾವು ಎದುರಿಸಿದ್ದ ಬಹುತೇಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಇಂದು ಸಾಧ್ಯವಾಗಿದೆ ಎಂದು ಹೇಳಲು ಹೆಮ್ಮೆ ಎನಿಸುತ್ತಿದೆ. ಬಡತನ, ಅನಕ್ಷರತೆ, ನಿರುದ್ಯೋಗ ಸಮಸ್ಯೆಗಳನ್ನು ಯಶಸ್ವಿಯಾಗಿ ಎದುರಿಸಿದ್ದೇವೆ. ಆಹಾರ ಉತ್ಪಾದನೆಯಲ್ಲಿ ನಾವು ಸ್ವಾವಲಂಬನೆಯನ್ನು ಸಾಧಿಸಿದ್ದೇವೆ. ಆದರೆ ಜಾತಿ ಮತ್ತು ಧರ್ಮದ ಸೋಗಿನಲ್ಲಿ ಸಾಮಾಜಿಕ ಮತ್ತು ಧಾರ್ಮಿಕ ಸಾಮರಸ್ಯವನ್ನು ಕೆಡಿಸುವ ಪ್ರಯತ್ನ ನಮ್ಮ ಅಭಿವೃದ್ಧಿಯ ಓಟಕ್ಕೆ ತೊಡರುಗಾಲಾಗಿದೆ. ಇಂತಹ ಪ್ರಯತ್ನಗಳನ್ನು ಭಂಗಗೊಳಿಸಿ ಶರಣರು, ಸಂತರು, ಸೂಫಿಗಳು, ದಾರ್ಶನಿಕರು ಜನ್ಮ ತಳೆದ ನಮ್ಮ ಕನ್ನಡನಾಡನ್ನು ಸರ್ವಜನಾಂಗದ ಶಾಂತಿಯ ತೋಟವನ್ನಾಗಿಯೇ ಉಳಿಸಲು ನಮ್ಮ ಸರ್ಕಾರ ಕಟಿಬದ್ಧವಾಗಿದೆ. ನಮ್ಮ ರಾಜ್ಯದ ಸರ್ವರನ್ನೂ ಒಳಗೊಂಡ ಸುಸ್ಥಿರ ಅಭಿವೃದ್ಧಿ ಮಾದರಿ ಇಂದು “ಕರ್ನಾಟಕ ಮಾದರಿ’ ಎಂದು ದೇಶಪ್ರಸಿದ್ಧವಾಗಿದೆ ಎಂದು ಹೇಳಲು ನನಗೆ ಹೆಮ್ಮೆ ಅನಿಸುತ್ತಿದೆ.
ಸ್ವಾತಂತ್ರ್ಯೋತ್ಸವ ಎನ್ನುವುದು ಕೇವಲ ಸಂಭ್ರಮಾಚರಣೆಯ ದಿನ ಆಗಬಾರದು, ಇದು ಪ್ರಜೆಗಳಾದ ನಮ್ಮೆಲ್ಲರ ಕರ್ತವ್ಯವನ್ನು ನೆನಪು ಮಾಡಿಕೊಳ್ಳುವ ದಿನವೂ ಆಗಬೇಕು. ಪ್ರಜೆಗಳಾಗಿ ನಾವು ಪ್ರತಿಕ್ಷಣವೂ ಜಾಗೃತರಾಗಿದ್ದು ಸಂವಿಧಾನ ಮತ್ತು ಪ್ರಜಾಪ್ರಭುತ್ವವನ್ನು ದಮನ ಮಾಡುವ ದುಷ್ಟಶಕ್ತಿಗಳ ಕುಟಿಲ ಪ್ರಯತ್ನವನ್ನು ವಿಫಲಗೊಳಿಸಿ ಅದನ್ನು ರಕ್ಷಿಸುವ ಜವಾಬ್ದಾರಿಯನ್ನು ನಿರ್ವಹಿಸಬೇಕಾಗುತ್ತದೆ. ಈ ಕರ್ತವ್ಯದ ಪಾಲನೆಯೇ ನಿಜವಾದ ದೇಶಭಕ್ತಿ, ಇದು ತ್ಯಾಗ-ಬಲಿದಾನದ ಮೂಲಕ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ನಮ್ಮ ಹಿರಿಯರಿಗೆ ಸಲ್ಲಿಸುವ ಗೌರವವೂ ಹೌದು. ದೇಶಭಕ್ತಿ ಎನ್ನುವುದು ನನ್ನ ಪಾಲಿಗೆ ಕೇವಲ ರಾಜಕೀಯ ಬೂಟಾಟಿಕೆಯ ಘೋಷಣೆ ಅಲ್ಲ. ಅದು ನಾಡಿನ ಪ್ರತಿಯೊಬ್ಬ ಪ್ರಜೆಯ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಅಭಿವೃದ್ದಿ ಹಾಗೂ ಸಾಮಾಜಿಕ ಸಾಮರಸ್ಯದ ರಕ್ಷಣೆಯ ಹೊಣೆಗಾರಿಕೆಯ ಸಂಕಲ್ಪ. ಈ ಹೊಣೆಗಾರಿಕೆಯನ್ನುs ಪ್ರಾಮಾಣಿಕವಾಗಿ ನೆರವೇರಿಸಿ ರಾಜ್ಯದ ಜನರ ಶ್ರೇಯೋಭಿವೃದ್ಧಿ ಸಾಧಿಸಲು ನಮ್ಮ ಸರ್ಕಾರ ಬದ್ಧವಾಗಿದೆ. ಇದಕ್ಕೆ ಎದುರಾಗುವ ಸವಾಲುಗಳಿಂದ ಕುಗ್ಗುವ, ಜಗ್ಗುವ ಇಲ್ಲವೇ ಹಿಮ್ಮೆಟ್ಟುವ ಪ್ರಶ್ನೆಯೇ ಇಲ್ಲ. ಈ ಹೋರಾಟದ ಕೆಚ್ಚಿಗೆ ನಮ್ಮ ಸ್ವಾತಂತ್ರ್ಯ ಹೋರಾಟಗಾರರ ಬದುಕೇ ದೊಡ್ಡ ಸ್ಪೂರ್ತಿ ಎಂದರು.

 

 

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...