ಬೆಂಗಳೂರು: ಚಾಮರಾಜಪೇಟೆ ಈದ್ಗಾ ಮೈದಾನ ವಕ್ಫ್ ಮಂಡಳಿಗೆ ಸೇರಿದ್ದಲ್ಲ, ಇದು ಕಂದಾಯ ಇಲಾಖೆ ಆಸ್ತಿ ಎಂದು ಬಿಬಿಎಂಪಿ ಘೋಷಣೆ ಮಾಡಿರುವುದು ಸಂತಸದ ವಿಚಾರ. ಈ ಬಾರಿ ಸ್ವಾತಂತ್ರ್ಯ ದಿನಾಚರಣೆಯನ್ನು ಈದ್ಗಾ ಮೈದಾನದಲ್ಲಿ ಆಚರಿಸುತ್ತೇವೆ ಎಂದು ಚಾಮರಾಜಪೇಟೆ ನಾಗರಿಕರ ಒಕ್ಕೂಟ ತಿಳಿಸಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಾಗರಿಕರ ಒಕ್ಕೂಟ ಮುಖಂಡರು, ಈದ್ಗಾ ಮೈದಾನದಲ್ಲಿ ಸ್ವಾತಂತ್ರ್ಯೋತ್ಸವ ಆಚರಿಸಲು ನಿರ್ಧರಿಸಿದ್ದೇವೆ. ಈ ಬಗ್ಗೆ ಬಿಬಿಎಂಪಿ ಅಧಿಕಾರಿಗಳಿಗೂ ಮನವಿ ಸಲ್ಲಿಸಿದ್ದೇವೆ. ಅಧಿಕಾರಿಗಳು ಅನುಮತಿ ಕೊಡಲಿ, ಬಿಡಲಿ ಸ್ವಾತಂತ್ರ್ಯ ದಿನವನ್ನು ನಾವು ಸಂಭ್ರಮದಿಂದ ಆಚರಿಸುತ್ತೇವೆ. ಹಿಂದೂ ಸಂಘಟನೆಗಳೂ ಈ ಕಾರ್ಯಕ್ರಮಕ್ಕೆ ಬೆಂಬಲ ನೀಡುವುದಾಗಿ ತಿಳಿಸಿವೆ ಎಂದರು.
ಮೈದಾನ ಸಾರ್ವಜನಿಕರ ಸ್ವತ್ತು. ತ್ರಿವರ್ಣಧ್ವಜ ಹಾರಿಸಲು ಯಾರ ಅನುಮತಿಯೂ ಬೇಕಿಲ್ಲ. ನಮ್ಮ ಜೀವ ಹೋದರೂ ಸರಿ ನಾವು ಧ್ವಜಾರೋಹಣ ಮಾಡಿಯೇ ಮಾಡುತ್ತೇವೆ ಎಂದು ಹೇಳಿದರು.
ವಕ್ಫ್ ಮಂಡಳಿ ಕಾನೂನು ಹೋರಾಟಕ್ಕೆ ಮುಂದಾದರೆ ನಾವೂ ಹೋರಾಡಲು ಸಿದ್ಧ. ನಮ್ಮ ಬಳಿಯೂ ದಾಖಲೆಗಳು ಇವೆ. ಅಲ್ಲದೇ ನಮ್ಮ ಹೋರಾಟಕ್ಕೆ ಎಲ್ಲರೂ ಬೆಂಬಲ ವ್ಯಕ್ತಪಡಿಸುತ್ತಾರೆ ಎಂದು ಹೇಳಿದರು.