ಭಾರತದಲ್ಲಿ ಆಗಸ್ಟ್ 15 ರಂದು 77ನೇ ಸ್ವಾತಂತ್ರೋತ್ಸವವನ್ನು ಆಚರಿಸಲಾಗುತ್ತಿದೆ. ಈ ಸಂದರ್ಭದಲ್ಲಿ ಒಂದಷ್ಟು ಇತಿಹಾಸ ಹಾಗೂ ವಿಶೇಷತೆಗಳ ಬಗ್ಗೆ ತಿಳಿದುಕೊಳ್ಳೋಣ…..
ಭಾರತಕ್ಕೆ ಸ್ವಾತಂತ್ರ್ಯ ಆಗಸ್ಟ್ 15,1947 ರಂದು ಬಂದಿರುವುದು ನಿಮಗೆಲ್ಲಾ ಗೊತ್ತೇ ಇದೆ. ಅಂದು ಭಾಷಣ ಮಾಡಿದ ಭಾರತದ ಪ್ರಥಮ ಪ್ರಧಾನಮಂತ್ರಿ ಜವಾಹರಲಾಲ್ ನೆಹರು ಅವರು “ಪ್ರಪಂಚವು ಮಧ್ಯರಾತ್ರಿಯಲ್ಲಿ ನಿದ್ರಿಸುತ್ತಿರುವಾಗ ಭಾರತದಲ್ಲಿ ಜೀವನ ಹಾಗೂ ಸ್ವಾತಂತ್ರವು ಎಚ್ಚರಗೊಂಡಿದೆ” ಎಂದು ಸ್ವಾತಂತ್ರ್ಯಪೂರ್ವ ಭಾಷಣದಲ್ಲಿ ತಿಳಿಸಿದ್ದರು.
ಅಂದು ಜವಾಹರಲಾಲ್ ನೆಹರು, ದೆಹಲಿಯ ಕೆಂಪು ಕೋಟೆ ಮೇಲೆ ಧ್ವಜಾರೋಹಣ ನಡೆಸಿ ಭಾರತಕ್ಕೆ ಸ್ವಾತಂತ್ರ್ಯ ಲಭಿಸಿರುವುದನ್ನು ಅಧಿಕೃತವಾಗಿ ಘೋಷಿಸಿದರು. ಈಗಲೂ ಇದೇ ಪದ್ಧತಿಯಂತೆ ಆಗಸ್ಟ್ 15 ರಂದು ಪ್ರಧಾನ ಮಂತ್ರಿಗಳು ಕೆಂಪು ಕೋಟೆ ಮೇಲೆ ದ್ವಜಾರೋಹಣ ನಡೆಸಿಕೊಂಡು ಬಂದಿದ್ದಾರೆ.
ಬ್ರಿಟಿಷ್ ಸರ್ಕಾರವು, ಲಾರ್ಡ್ ಮೌಂಟ್ ಬ್ಯಾಟನ್ ಅವರಿಗೆ ಜೂನ್ 30, 1948 ರಂದು ಭಾರತವನ್ನು ಬಿಟ್ಟು ಕೊಡುವಂತೆ ತಿಳಿಸಿತ್ತು. ಆದರೆ ರಾಜಗೋಪಾಲಾಚಾರಿಯವರು ಬ್ರಿಟಿಷ್ ಸರ್ಕಾರವನ್ನು ಕುರಿತು ನೀವು ನಮಗೆ ಸ್ವಾತಂತ್ರ್ಯ ಕೊಡಲು ಏನೂ ಉಳಿದಿಲ್ಲ. ಆದ್ದರಿಂದ ಬೇಗನೆ ಸ್ವಾತಂತ್ರ್ಯ ಕೊಡುವುದು ಒಳ್ಳೆಯದು ಎಂದು ತಿಳಿಸಿದ್ದರು. ಜೊತೆಗೆ ಲಾರ್ಡ್ ಮೌಂಟ್ ಬ್ಯಾಟನ್ ವೈಯಕ್ತಿಕ ಕಾರಣಗಳಿಗಾಗಿ ನಿರ್ಧರಿಸಿದ್ದಕ್ಕಿಂತ ಮುಂಚಿತವಾಗಿಯೇ ಆಗಸ್ಟ್ 15,1947 ರಂದು ಭಾರತಕ್ಕೆ ಸ್ವಾತಂತ್ರ್ಯವನ್ನು ಕೊಡಲು ಬ್ರಿಟಿಷ್ ಸರ್ಕಾರವು ಒಪ್ಪಿಗೆ ಸೂಚಿಸಿತು.