ಇದೇ ವರ್ಷದ ಜೂನ್ ನಲ್ಲಿ ಲೇಹ್ ನಿಂದ ಮನಾಲಿಗೆ ಏಕಾಂಗಿಯಾಗಿ 55 ಗಂಟೆ 13 ನಿಮಿಷಗಳಲ್ಲಿ ಸೈಕ್ಲಿಂಗ್ ಮಾಡಿ ಗಿನ್ನೆಸ್ ದಾಖಲೆ ನಿರ್ಮಿಸಿದ್ದ ಪುಣೆಯ ಪ್ರೀತಿ ಮಾಸ್ಕೆ ಈಗ ಮತ್ತೊಂದು ಸಾಧನೆ ಮಾಡಿದ್ದಾರೆ.
ಸ್ವಾತಂತ್ರ್ಯ ದಿನದ ಅಮೃತ ಮಹೋತ್ಸವ ಸಂದರ್ಭದಲ್ಲಿ ಅವರು ಲೇಹ್ನಿಂದ ಮನಾಲಿವರೆಗೆ 430 ಕಿಮೀ ಫ್ರೀಡಂ ರನ್ ಪೂರ್ಣಗೊಳಿಸಿ ದಾಖಲೆ ನಿರ್ಮಿಸಿದ್ದಾರೆ. ಎರಡು ಮಕ್ಕಳ ತಾಯಿಯೂ ಆಗಿರುವ ಅಲ್ಟ್ರಾ ರನ್ನರ್ ಈ ದೂರವನ್ನು 4 ದಿನ, 22 ಗಂಟೆ ಮತ್ತು 9 ನಿಮಿಷಗಳಲ್ಲಿ ಪೂರ್ಣಗೊಳಿಸಿದರು.
ಬಾರ್ಡರ್ ರೋಡ್ಸ್ ಆರ್ಗನೈಸೇಶನ್ ಇಂಡಿಯಾವು ಪ್ರೀತಿಯವರ ಕಾರ್ಯಕ್ಷಮತೆಯ ಬಗ್ಗೆ ಟ್ವೀಟ್ ಮಾಡಿ, ಪ್ರೀತಿ ಮಾಸ್ಕೆ ಮತ್ತೊಂದು ಮಹೋನ್ನತ ಸಾಧನೆಯಿಂದ ನಮಗೆ ಹೆಮ್ಮೆಯಾಗುತ್ತದೆ. ನಾರಿ ಶಕ್ತಿಯ ಉಜ್ವಲ ಉದಾಹರಣೆ ಎಂದು ಕರೆದಿದೆ. ಬಾರ್ಡರ್ ರೋಡ್ ಆರ್ಗನೈಸೇಷನ್ನ ಓಟಗಾರರು, ಮತ್ತು ವೈದ್ಯಕಿಯ ತಂಡದ ಬೆಂಬಲ ನೀಡಿದ್ದನ್ನು ಅದು ಸ್ಮರಿಸಿದೆ.
ಆಕೆ ಜೂನ್ 24ರಂದು ಮನಾಲಿಯಲ್ಲಿ ತನ್ನ ಸೈಕಲ್ ಪ್ರಯಾಣ ಮುಗಿಸಿದ್ದು, “ಉಸಿರಾಟದ ತೊಂದರೆಯಿಂದಾಗಿ ನಾನು ಪ್ರಯಾಣ ಮಾಡುವಾಗ ಎರಡು ಬಾರಿ ಆಮ್ಲಜನಕವನ್ನು ಬಳಸಬೇಕಾಯಿತು” ಎಂದು ಹೇಳಿಕೊಂಡಿದ್ದರು.
ಈಕೆಯ ಸಾಧನೆಗೆ ನೆಟ್ಟಿಗರು ಮೆಚ್ಚುಗೆಯ ಮಹಾಪೂರವನ್ನೇ ಹರಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಕೆಂಪುಕೋಟೆಯ ಮೇಲೆ ಧ್ವಜಾರೋಹಣ ನೆರವೇರಿಸಿ ನಾರಿ ಶಕ್ತಿಯ ಬಗ್ಗೆ ಪ್ರಸ್ತಾಪ ಮಾಡುವುದಕ್ಕೂ ಇವರು ಈ ಸಾಧನೆ ಮಾಡಿರುವುದಕ್ಕೂ ಕಾಕತಾಳೀಯ ಎನಿಸಿದೆ.