ಭಾರತವು 76ನೇ ಸ್ವಾತಂತ್ರ್ಯ ದಿನ ಆಚರಿಸುತ್ತಿರುವಾಗ ʼಹರ್ ಘರ್ ತಿರಂಗಾʼ ಅಭಿಯಾನ ದೇಶದ ಮೂಲೆ ಮೂಲೆಯಲ್ಲಿ ಸದ್ದು ಮಾಡಿದೆ. ಈ ಅಭಿಯಾನದಡಿ ತ್ರಿವರ್ಣ ಧ್ವಜ ಹಾರಿಸಿದ ಫೋಟೋ ಹಾಗೂ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಪ್ರವಾಹವನ್ನೇ ಸೃಷ್ಟಿಸಿದೆ.
ʼಹರ್ ಘರ್ ತಿರಂಗಾʼ ಅಭಿಯಾನಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಚಾಲನೆ ನೀಡಿದ್ದರು. ‘ತ್ರಿವರ್ಣದ ಶಕ್ತಿಯನ್ನು’ ಶ್ಲಾಘಿಸಿ “ನಾವು ಇದನ್ನು ಸ್ವಲ್ಪ ಸಮಯದ ಹಿಂದೆ ಉಕ್ರೇನ್ನಲ್ಲಿ ನೋಡಿದ್ದೇವೆ. ತಿರಂಗವು ಭಾರತೀಯರಿಗೆ ಮಾತ್ರವಲ್ಲದೆ ಇತರ ದೇಶಗಳ ಜನರಿಗೆ ಸುರಕ್ಷಿತ ಪ್ರದೇಶಗಳಿಗೆ ತಪ್ಪಿಸಿಕೊಳ್ಳಲು ರಕ್ಷಣಾತ್ಮಕ ಗುರಾಣಿಯಾಗಿತ್ತು ಎಂದಿದ್ದರು.
ದೇಶದಲ್ಲಿ ಅಲೆ ಎಬ್ಬಿಸಿದ ತಿರಂಗಾ ಅಭಿಯಾನದ ಭಾಗವಾಗಿ ಎಲ್ಲರೂ ಸಹ ʼಹರ್ ಘರ್ ತಿರಂಗಾʼ ವೆಬ್ ಸೈಟ್ನಲ್ಲಿ ತ್ರಿವರ್ಣ ಧ್ವಜದೊಂದಿಗೆ ಸೆಲ್ಫಿ ಅಪ್ಲೋಡ್ ಮಾಡವ ಅವಕಾಶ ಒದಗಿಸಲಾಗಿತ್ತು. ಸರಿಸುಮಾರು 5 ಕೋಟಿಗಿಂತ ಹೆಚ್ಚು ಜನ ಫೋಟೋ, ಸೆಲ್ಫಿ ಅಪ್ಲೋಡ್ ಮಾಡಿರುವುದು ದಾಖಲೆಯೇ ಸರಿ. ಹಾಗೆಯೇ ಈ ಅಭಿಯಾನವು ಅಧಿಕೃತ ಗೀತೆಯನ್ನು ಹೊಂದಿದ್ದು, ಅದು ಕ್ರೀಡೆ ಮತ್ತು ಮನರಂಜನೆಯಂತಹ ಕ್ಷೇತ್ರಗಳಾದ್ಯಂತ ಪ್ರಮುಖ ವ್ಯಕ್ತಿಗಳನ್ನು ಒಳಗೊಂಡಿದೆ. ಈ ಗೀತೆಯನ್ನು ವರ್ಷದ ಅತಿದೊಡ್ಡ ದೇಶಭಕ್ತಿ ಗೀತೆ ಎಂದು ಹೆಸರಿಸಲಾಗಿದೆ, ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಪ್ರಕಾರ, ನಿಮ್ಮ ಮನೆಯಲ್ಲಿ ನೀವು ರಾಷ್ಟ್ರಧ್ವಜವನ್ನು ಹಾರಿಸುವಾಗ ಹಾಡನ್ನು ಪ್ಲೇ ಮಾಡುವ ಅವಕಾಶವಿತ್ತು.
ಇನ್ನು ಸಾಮಾಜಿಕ ಜಾಲತಾಣವಂತೂ ತ್ರಿವರ್ಣದಿಂದ ತುಂಬಿಹೋಗಿತ್ತು. ಸೈನ್ಯದಿಂದ, ಮಕ್ಕಳ ಮಾರ್ಚ್ವರೆಗೆ ಹಳ್ಳಿಯಿಂದ ದಿಲ್ಲಿವರೆಗೆ ನಡೆದ ಸಂಭ್ರಮಾಚರಣೆಯ ಫೋಟೋ ವಿಡಿಯೋ ವೈರಲ್ ಆಯಿತು. ಆದಿವಾಸಿಗಳು ಕಾಡಂಚಿನಲ್ಲಿ ಧ್ವಜ ಹಿಡಿದು ಸಾಗಿದ ವಿಡಿಯೋ, ಸಮುದ್ರದಾಳದಲ್ಲಿ ಧ್ವಜಾರೋಹಣ, ಆಕಾಶದಲ್ಲಿ ಧ್ವಜಾರೋಹಣ ಹೀಗೆ ವೈವಿಧ್ಯಮಯ ಸನ್ನಿವೇಶದ ವಿಡಿಯೋಗಳು ಗಮನ ಸೆಳೆದವು.