
ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಎರಡನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ, ನ್ಯೂಜಿಲೆಂಡ್ ವಿರುದ್ಧ ಭರ್ಜರಿ ಗೆಲುವು ಸಾಧಿಸಿದೆ. ಈ ಮೂಲಕ 2 ಪಂದ್ಯಗಳ ಟೆಸ್ಟ್ ಸರಣಿಯನ್ನು 1-0 ಅಂತರದಲ್ಲಿ ಭಾರತ ಕೈವಶ ಮಾಡಿಕೊಂಡಿದೆ.
ನ್ಯೂಜಿಲೆಂಡ್ ವಿರುದ್ಧದ ಈ ಟೆಸ್ಟ್ ಪಂದ್ಯ ಮತ್ತು ಸರಣಿ ವಶಪಡಿಸಿಕೊಳ್ಳಲು ಟೀಂ ಇಂಡಿಯಾಕ್ಕೆ ಸೋಮವಾರ ಕೇವಲ 4 ವಿಕೆಟ್ ಗಳ ಅವಶ್ಯಕತೆಯಿತ್ತು. ಭಾರತ, ಕಿವೀಸ್ ತಂಡವನ್ನು 372 ರನ್‌ಗಳಿಂದ ಸೋಲಿಸಿದೆ. ಇದು ಭಾರತ ಕ್ರಿಕೆಟ್ ತಂಡಕ್ಕೆ ರನ್ ಗಳಿಕೆಯಲ್ಲಿ ಅತಿ ದೊಡ್ಡ ಗೆಲುವಾಗಿದೆ.
ರನ್‌ಗಳ ವಿಷಯದಲ್ಲಿ ಟೀಮ್ ಇಂಡಿಯಾದ ಅತಿದೊಡ್ಡ ಟೆಸ್ಟ್ ಗೆಲುವು :
ನ್ಯೂಜಿಲೆಂಡ್ ವಿರುದ್ಧ 372 ರನ್ (2021)
ದಕ್ಷಿಣ ಆಫ್ರಿಕಾ ವಿರುದ್ಧ 337 ರನ್ (2015)
ನ್ಯೂಜಿಲೆಂಡ್ ವಿರುದ್ಧ 321 ರನ್ (2016)
ಆಸ್ಟ್ರೇಲಿಯಾ ವಿರುದ್ಧ 320 ರನ್ (2008)
ಕೊನೆಯ ದಿನ ಟೀಂ ಇಂಡಿಯಾ ಜಯಂತ್ ಯಾದವ್ ಮತ್ತು ರವಿಚಂದ್ರನ್ ಅಶ್ವಿನ್ ಮಿಂಚಿದ್ದಾರೆ. ತಲಾ 4-4 ವಿಕೆಟ್ ಪಡೆದು, ಭಾರತದ ಗೆಲುವನ್ನು ಸುಲಭ ಮಾಡಿದ್ದಾರೆ. ಅಕ್ಷರ್ ಪಟೇಲ್ 1 ವಿಕೆಟ್ ಪಡೆದಿದ್ದಾರೆ. ಈ ಗೆಲುವಿನ ಮೂಲಕ ತವರಿನಲ್ಲಿ ಭಾರತ 14 ಟೆಸ್ಟ್ ಸರಣಿ ಗೆದ್ದಂತಾಗಿದೆ.