ಕಾನ್ಪುರ: ಟೀಂ ಇಂಡಿಯಾದ ನೂತನ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಅವರದ್ದು ಅತ್ಯಂತ ಸರಳ ವ್ಯಕ್ತಿತ್ವ ಎಂಬುದು ಎಲ್ಲರಿಗೂ ತಿಳಿದಿದೆ.
ಇದೀಗ ಭಾರತ ಹಾಗೂ ನ್ಯೂಜಿಲ್ಯಾಂಡ್ ವಿರುದ್ಧ ನಡೆದ ಮೊದಲ ಟೆಸ್ಟ್ ನ ರೋಚಕ ಪಂದ್ಯಕ್ಕೆ ಪಿಚ್ ಸಿದ್ಧಪಡಿಸಿದ ಶಿವಕುಮಾರ್ ನೇತೃತ್ವದ ಗ್ರೀನ್ ಪಾರ್ಕ್ ಗ್ರೌಂಡ್ ಸ್ಟಾಫ್ಗೆ, ಟೀಮ್ ಇಂಡಿಯಾ ಕೋಚ್ ರಾಹುಲ್ ದ್ರಾವಿಡ್ 35,000 ರೂ. ಬಹುಮಾನ ನೀಡಿದ್ದಾರೆ.
ನ್ಯೂಜಿಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯ ರೋಚಕ ಡ್ರಾನಲ್ಲಿ ಅಂತ್ಯಗೊಂಡಿತ್ತು. ಟೀಂ ಇಂಡಿಯಾ ಗೆಲ್ಲಬಹುದಾಗಿದ್ದ ಪಂದ್ಯವನ್ನು ನ್ಯೂಜಿಲ್ಯಾಂಡ್ ತಂಡ ಡ್ರಾ ಮಾಡಿಕೊಳ್ಳುವಲ್ಲಿ ಸಫಲರಾಗಿದ್ದಾರೆ. ಟೆಸ್ಟ್ ಮ್ಯಾಚ್ ನಲ್ಲಿ ಅಪರೂಪವೆಂದೆನಿಸುವ ಇಂತಹ ಸನ್ನಿವೇಶ ದ್ರಾವಿಡ್ ಅವರಿಗೆ ಬಹಳ ಖುಷಿಯಾಗಿದೆ. ಸ್ಪರ್ಧಾತ್ಮಕ ಪಿಚ್ ಸಿದ್ಧಪಡಿಸಿದಕ್ಕಾಗಿ, ಮೆಚ್ಚುಗೆಯ ಸಂಕೇತವಾಗಿ ಮೈದಾನದ ಸಿಬ್ಬಂದಿಗೆ ಅವರು 35,000 ರೂ. ಬಹುಮಾನ ನೀಡಿದ್ದಾರೆ.
ರಾಹುಲ್ ದ್ರಾವಿಡ್ ಅವರು ಮೈದಾನದ ಸಿಬ್ಬಂದಿಗೆ ವೈಯಕ್ತಿಕವಾಗಿ 35,000 ರೂ. ನಗದನ್ನು ಬಹುಮಾನವಾಗಿ ನೀಡಿದ್ದಾರೆ ಎಂಬುದನ್ನು ಅಧಿಕೃತವಾಗಿ ಘೋಷಿಸಲು ಬಯಸುತ್ತೇವೆ ಎಂದು ಪಂದ್ಯದ ನಂತರ ಉತ್ತರ ಪ್ರದೇಶ ಕ್ರಿಕೆಟ್ ಸಂಸ್ಥೆ ತಿಳಿಸಿದೆ.